ಫುಟ್ಬಾಲ್ ನ ಮೊದಲ ಬಿಲಿಯಾಧೀಶ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI
ಹೊಸದಿಲ್ಲಿ, ಅ. 8: ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಅಧಿಕೃತವಾಗಿ ಫುಟ್ಬಾಲ್ ನ ಮೊದಲ ಬಿಲಿಯಾಧೀಶ ಆಗಿದ್ದಾರೆ ಎಂದು ‘ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್’ ವರದಿ ಮಾಡಿದೆ.
ಅವರ ನಿವ್ವಳ ಸಂಪತ್ತು 1.4 ಬಿಲಿಯ ಡಾಲರ್ (ಸುಮಾರು 12,400 ಕೋಟಿ ರೂಪಾಯಿ) ಎಂದು ಅದು ಅಂದಾಜು ಮಾಡಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಗೆ ರೊನಾಲ್ಡೊ ಸೇರ್ಪಡೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಅವರು ಫುಟ್ಬಾಲ್ ನ ಅತ್ಯಧಿಕ ಸಂಪಾದನೆಯ ಆಟಗಾರನೆಂಬ ತನ್ನ ಹೆಗ್ಗಳಿಕೆಯನ್ನು ಬಲಪಡಿಸಿಕೊಂಡಿದ್ದಾರೆ ಮತ್ತು ತನ್ನ ದೀರ್ಘಕಾಲೀನ ಎದುರಾಳಿ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.
ದಾಖಲೆ ಮುರಿಯುವ ವೇತನಗಳು, ಜಾಹೀರಾತುಗಳಿಂದ ಬರುವ ಆದಾಯ ಮತ್ತು ಯಶಸ್ವಿ ಸ್ವ ಉದ್ಯಮಗಳಿಂದಾಗಿ ರೊನಾಲ್ಡೊರ ಸಂಪತ್ತಿನಲ್ಲಿ ಏರಿಕೆಯಾಗಿದೆ. ಯುರೋಪ್ನಲ್ಲಿ ಅವರು ಆಡುತ್ತಿದ್ದಾಗ ಪಡೆಯುತ್ತಿದ್ದ ವೇತನಗಳು ಕ್ರೀಡಾ ಬದುಕಿನ ಹೆಚ್ಚಿನ ಅವಧಿಯಲ್ಲಿ ಮೆಸ್ಸಿಯ ವೇತನಗಳನ್ನು ಸರಿಗಟ್ಟುತ್ತಿದ್ದವು. ಆದರೆ, ರೊನಾಲ್ಡೊ 2023ರಲ್ಲಿ ಸೌದಿ ಅರೇಬಿಯದ ಕ್ಲಬ್ ಅಲ್-ನಸ್ರ್ ಸೇರಿದ ಬಳಿಕ ಅವರ ವೇತನ ಅಗಾಧ ಪ್ರಮಾಣದಲ್ಲಿ ಏರಿಕೆಯಾಯಿತು. ಅವರಿಗೆ ವೇತನ ಮತ್ತು ಬೋನಸ್ ರೂಪಗಳಲ್ಲಿ ಪ್ರತಿ ವರ್ಷ ತೆರಿಗೆರಹಿತ 200 ಮಿಲಿಯ ಡಾಲರ್ (ಸುಮಾರು 1,775 ಕೋಟಿ ರೂಪಾಯಿ) ಮತ್ತು 30 ಮಿಲಿಯ ಡಾಲರ್ (ಸುಮಾರು 266 ಕೋಟಿ ರೂಪಾಯಿ) ಗುತ್ತಿಗೆಗೆ ಸಹಿ ಹಾಕುವುದಕ್ಕಾಗಿ ನೀಡುವ ಬೋನಸ್ ನೀಡಲಾಯಿತು. ಜೊತೆಗೆ, ಅವರಿಗೆ ಕ್ಲಬ್ ನ ಶೇರುಗಳು ಮತ್ತು ಖಾಸಗಿ ವಿಮಾನ ಮುಂತಾದ ಸೌಲಭ್ಯಗಳನ್ನೂ ನೀಡಲಾಗಿದೆ.
ರೊನಾಲ್ಡೊ 2002 ಮತ್ತು 2023ರ ನಡುವಿನ ಅವಧಿಯಲ್ಲಿ ವೇತನವೊಂದರಿಂದಲೇ 550 ಮಿಲಿಯ ಡಾಲರ್ (ಸುಮಾರು 4,882 ಕೋಟಿ ರೂಪಾಯಿ) ಸಂಪಾದಿಸಿದ್ದಾರೆ.







