ಪೋರ್ಚುಗಲ್ಗೆ ರೊನಾಲ್ಡೊ ವಿದಾಯ; 23 ವರ್ಷಗಳ ಫುಟ್ಬಾಲ್ ಪಯಣಕ್ಕೆ ತೆರೆ
► 7ನೇ ಸಂಖ್ಯೆಯ ಜೆರ್ಸಿಗೆ ಭಾವನಾತ್ಮಕ ವಿದಾಯ ► ತರಬೇತುದಾರನೊಂದಿಗಿನ ಸಂಘರ್ಷದ ಬೆನ್ನಲ್ಲೇ ನಿವೃತ್ತಿ ಘೋಷಣೆ

ರೊನಾಲ್ಡೊ (Photo: Reuters)
ಲಿಸ್ಬನ್: ದಾಖಲೆಗಳು, ಟ್ರೋಫಿಗಳು, ಅಸಂಖ್ಯಾತ ಅಭಿಮಾನಿಗಳ ಪ್ರೀತಿ... ಪೋರ್ಚುಗಲ್ ಫುಟ್ಬಾಲ್ ನ ಹೆಮ್ಮೆಯ ಸಂಕೇತವಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಅವರ 23 ವರ್ಷಗಳ ಅಂತರರಾಷ್ಟ್ರೀಯ ಪಯಣ ಅಂತ್ಯಗೊಂಡಿದೆ. 41 ವರ್ಷದ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ವಿಡಿಯೊ ಹಂಚಿಕೊಳ್ಳುವ ಮೂಲಕ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. 2003ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೊನಾಲ್ಡೊ, ತಂಡದ ಐಕಾನಿಕ್ 7ನೇ ಸಂಖ್ಯೆಯ ಜೆರ್ಸಿ ಧರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಪೋರ್ಚುಗಲ್ ಪರ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದ ಅವರು, ಮರೆಯಲಾಗದ ಸಾಧನೆಗಳ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಪೋರ್ಚುಗಲ್ ಜನರನ್ನು ಉದ್ದೇಶಿಸಿ ಸಂದೇಶ ಹಂಚಿಕೊಂಡಿರುವ ರೊನಾಲ್ಡೊ, ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದುವ ನಿರ್ಧಾರ ಸುಲಭದ್ದಾಗಿರಲಿಲ್ಲ ಎಂದು ಹೇಳಿದ್ದಾರೆ. ತಂಡದೊಂದಿಗಿನ ತಮ್ಮ ಪಯಣ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಿದೆ. ದೇಶವನ್ನು ಪ್ರತಿನಿಧಿಸುವುದು ಕೇವಲ ಫುಟ್ ಬಾಲ್ ಆಡುವುದಕ್ಕಿಂತಲೂ ಹೆಚ್ಚಿನ ಅರ್ಥ ಹೊಂದಿತ್ತು. ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲವಾಗಿ ನಿಂತ ಜನರ ಪ್ರೀತಿಯನ್ನು ಅವರು ಸ್ಮರಿಸಿದ್ದಾರೆ.
'ಇಂದು ರಾಷ್ಟ್ರೀಯ ತಂಡದ ಪರವಾಗಿ ಮೈದಾನಕ್ಕಿಳಿಯುವ ನನ್ನ ಪಯಣ ಅಂತ್ಯಗೊಳ್ಳುತ್ತಿದೆ. ತಲೆಯೆತ್ತಿ, ನಾನು ಸವೆಸಿದ ಹಾದಿಯ ಬಗ್ಗೆ ಹೆಮ್ಮೆಪಡುತ್ತಾ, ಪೋರ್ಚುಗಲ್ ಗಾಗಿ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿದ್ದೇನೆ ಎಂಬ ಅರಿವಿನೊಂದಿಗೆ ನಿರ್ಗಮಿಸುತ್ತಿದ್ದೇನೆ.
7ನೇ ಸಂಖ್ಯೆಯ ಜೆರ್ಸಿ ಉಳಿಯಲಿದೆ. ಅದನ್ನು ಧರಿಸಿದ ಹೆಮ್ಮೆ ಎಂದೆಂದಿಗೂ ನನ್ನದಾಗಿರುತ್ತದೆ. ಪೋರ್ಚುಗಲ್ ಯಾವಾಗಲೂ ನನ್ನಲ್ಲಿರುತ್ತದೆ. ಎಂದೆಂದಿಗೂ, ಕ್ರಿಸ್ಟಿಯಾನೊ ರೊನಾಲ್ಡೊ' ಎಂದು ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ತರಬೇತುದಾರನೊಂದಿಗಿನ ಸಂಘರ್ಷದ ಬೆನ್ನಲ್ಲೇ ನಿರ್ಧಾರ
ಪೋರ್ಚುಗಲ್ ತಂಡದ ಮುಖ್ಯ ತರಬೇತುದಾರ ಜಾರ್ಜ್ ಜೀಸಸ್ ಅವರೊಂದಿಗಿನ ಭಿನ್ನಾಭಿಪ್ರಾಯದ ಬೆನ್ನಲ್ಲೇ ರೊನಾಲ್ಡೊ ನಿವೃತ್ತಿ ಘೋಷಿಸಿದ್ದಾರೆ. ಅಕ್ಟೋಬರ್ ನಲ್ಲಿ ರಾಷ್ಟ್ರೀಯ ತಂಡದ ತರಬೇತಿ ಶಿಬಿರದಿಂದ ಅವರು ಹೊರನಡೆದಿದ್ದರು. ಈ ಬೆಳವಣಿಗೆಯ ಬಳಿಕ ಅವರ ಅಂತರರಾಷ್ಟ್ರೀಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.
ತಂಡದಲ್ಲಿನ ತಮ್ಮ ಪಾತ್ರದ ವಿಚಾರವಾಗಿ ರೊನಾಲ್ಡೊ ಮತ್ತು ಅವರ ಮಾಜಿ ಅಲ್ ನಸರ್ ತಂಡದ ಕೋಚ್ ಜಾರ್ಜ್ ಜೀಸಸ್ ನಡುವೆ ಬಹಿರಂಗವಾಗಿಯೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಸಂಘರ್ಷ ಹಾಗೂ ತಂಡದ ಶಿಬಿರದಿಂದ ರೊನಾಲ್ಡೊ ಹೊರನಡೆದ ಬೆಳವಣಿಗೆಗಳ ಬೆನ್ನಲ್ಲೇ ನಿವೃತ್ತಿ ಘೋಷಣೆ ಹೊರಬಿದ್ದಿದೆ.






