ಪೋರ್ಚುಗಲ್ ಫುಟ್ಬಾಲ್ ತಂಡದ ತರಬೇತಿ ಶಿಬಿರ ತೊರೆದ ರೊನಾಲ್ಡೊ
‘ಸೂಕ್ತ ಸಮಯದಲ್ಲಿ ಸತ್ಯ ಬಹಿರಂಗಪಡಿಸುವೆ’

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI
ಹೊಸದಿಲ್ಲಿ, ಅ.1: ಪೋರ್ಚುಗಲ್ ನ ‘ನೇಷನ್ಸ್ ಲೀಗ್’ ತರಬೇತಿ ಶಿಬಿರವನ್ನು ತೊರೆದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಮೌನ ಮುರಿದಿದ್ದಾರೆ. ತಮ್ಮ ನಿರ್ಧಾರದ ಹಿಂದಿನ ಸತ್ಯವನ್ನು ‘ಸೂಕ್ತ ಸಮಯದಲ್ಲಿ’ ಎಲ್ಲ ಪೋರ್ಚುಗೀಸ್ ಜನರಿಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ. ರಾಷ್ಟ್ರೀಯ ತಂಡ ಹಾಗೂ ತಮ್ಮ ಎಲ್ಲ ಸಹ ಆಟಗಾರರಿಗೆ ಶುಭ ಹಾರೈಸಿದ್ದಾರೆ.
ಬುಧವಾರ ಪೋರ್ಚುಗಲ್ ಕೋಚ್ ಜಾರ್ಜ್ ಜೀಸಸ್ ಅವರ ಪತ್ರಿಕಾಗೋಷ್ಠಿ ಹಾಗೂ ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಪೆಡ್ರೊ ಪ್ರೊಯೆನಾ ಅವರೊಂದಿಗಿನ ಮಾತುಕತೆ ಬಳಿಕ ರೊನಾಲ್ಡೊ ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶ ಹಂಚಿಕೊಂಡಿದ್ದಾರೆ.
‘ರಾಷ್ಟ್ರೀಯ ತಂಡದ ಕೋಚ್ ಅವರ ಪತ್ರಿಕಾಗೋಷ್ಠಿ ಹಾಗೂ ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರೊಂದಿಗಿನ ಮಾತುಕತೆಯ ಬಳಿಕ, ರಾಷ್ಟ್ರೀಯ ತಂಡದ ತರಬೇತಿ ಶಿಬಿರವನ್ನು ತೊರೆಯಲು ನಿರ್ಧರಿಸಿದ್ದೇನೆ’ ಎಂದು ರೊನಾಲ್ಡೊ ಹೇಳಿದ್ದಾರೆ.
‘ನಾನು ಯಾವಾಗಲೂ ನನ್ನನ್ನು ಸಮರ್ಪಿಸಿಕೊಂಡಿರುವ ರಾಷ್ಟ್ರೀಯ ತಂಡವನ್ನು ತೊರೆಯಲು ಕಾರಣವಾದ ಸತ್ಯವನ್ನು ಸೂಕ್ತ ಸಮಯದಲ್ಲಿ ಎಲ್ಲ ಪೋರ್ಚುಗೀಸ್ ಜನರಿಗೆ ತಿಳಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಪೋರ್ಚುಗಲ್ ತಂಡಕ್ಕೆ ಹಾಗೂ ನನ್ನ ಎಲ್ಲ ಸಹ ಆಟಗಾರರಿಗೆ ಶುಭ ಹಾರೈಸಲು ಇದೇ ಸರಿಯಾದ ಸಮಯ’ ಎಂದು ರೊನಾಲ್ಡೊ ಹೇಳಿದ್ದಾರೆ.
►ಭಿನ್ನಾಭಿಪ್ರಾಯದ ಹಿನ್ನೆಲೆ
ಕೋಚ್ ಜಾರ್ಜ್ ಜೀಸಸ್ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ರೊನಾಲ್ಡೊ ತರಬೇತಿ ಶಿಬಿರ ತೊರೆದಿದ್ದಾರೆ ಎಂಬ ವರದಿಗಳ ನಡುವೆ ಅವರ ಹೇಳಿಕೆ ಮಹತ್ವ ಪಡೆದಿದೆ. ರೊನಾಲ್ಡೊ ನಿವೃತ್ತಿ ಘೋಷಿಸಿಲ್ಲ. ಆದರೂ ಅವರ ಸಂದೇಶದ ಧಾಟಿ, ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳ್ಳುವ ಸಾಧ್ಯತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘GOAL’ ಕೂಡ ಅವರ ಪೋಸ್ಟ್ ವಿದಾಯದ ಧಾಟಿಯನ್ನು ಹೊಂದಿದೆ ಎಂದು ಬಣ್ಣಿಸಿದೆ.
ನೇಷನ್ಸ್ ಲೀಗ್ನ ಲ್ಲಿ ಡೆನ್ಮಾರ್ಕ್ ವಿರುದ್ಧ ಪೋರ್ಚುಗಲ್ ಸೆಣಸಾಡುವ ಒಂದು ದಿನ ಮೊದಲು, ಬುಧವಾರ ರೊನಾಲ್ಡೊ ಕೋಪನ್ ಹೇಗನ್ ನಲ್ಲಿದ್ದ ಪೋರ್ಚುಗಲ್ ತಂಡದ ತರಬೇತಿ ಶಿಬಿರವನ್ನು ತೊರೆದಿದ್ದರು.
41 ವರ್ಷದ ರೊನಾಲ್ಡೊ ಗೆ ಕಳೆದ ಕೆಲವು ದಿನಗಳು ಕಷ್ಟಕರವಾಗಿದ್ದವು. ರವಿವಾರ ನಾರ್ವೆ ವಿರುದ್ಧ ಪೋರ್ಚುಗಲ್ 2–1 ಅಂತರದಲ್ಲಿ ಗೆದ್ದ ಪಂದ್ಯದಲ್ಲಿ ರೊನಾಲ್ಡೊ ಆಡಿರಲಿಲ್ಲ. ಬದಲಿ ಆಟಗಾರರ ಪಟ್ಟಿಯಲ್ಲಿದ್ದರೂ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಅವರನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸುವುದಾಗಿ ಜೀಸಸ್ ಹೇಳಿದ್ದರೂ, ಅಂತಿಮವಾಗಿ ಅವರನ್ನು ಆಡಿಸದಿರಲು ನಿರ್ಧರಿಸಿದ್ದರು.
ಇದಾದ ಬಳಿಕ ಸೋಮವಾರ ಮತ್ತು ಮಂಗಳವಾರ ರೊನಾಲ್ಡೊ ತಂಡದ ಇತರ ಆಟಗಾರರೊಂದಿಗೆ ತರಬೇತಿ ಪಡೆಯುವ ಬದಲು ಜಿಮ್ ನಲ್ಲಿ ವ್ಯಾಯಾಮ ಮಾಡಿದ್ದರು. ಅವರಿಗೆ ಯಾವುದೇ ಗಾಯವಾಗಿರಲಿಲ್ಲ.
ರೊನಾಲ್ಡೊ ಮತ್ತು ತಮ್ಮ ನಡುವೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಜೀಸಸ್ ಒತ್ತಿ ಹೇಳಿದ್ದರು. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೊನಾಲ್ಡೊ ತಂಡದೊಂದಿಗೆ ತರಬೇತಿ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದರು. ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಆಡಬೇಕೇ ಅಥವಾ ಬೇಡವೇ ಎಂಬುದನ್ನು ತಾವೇ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದ್ದರು.
‘ನಾನೇ ಕೋಚ್. ಆಟಗಾರನಿಗೆ ಬದಲಿ ಆಟಗಾರರ ಬೆಂಚ್ನಲ್ಲಿರುತ್ತೀರಿ ಎಂದು ಹೇಳಿದ್ದೇನೆ’ ಎಂದು ಜೀಸಸ್ ಹೇಳಿದ್ದರು.
ಆದರೆ ಪತ್ರಿಕಾಗೋಷ್ಠಿಯ ಬಳಿಕ ರೊನಾಲ್ಡೊ ತರಬೇತಿ ಶಿಬಿರದಿಂದ ಹೊರನಡೆದರು. ಪೋರ್ಚುಗೀಸ್ ಪತ್ರಿಕೆ ‘ಎ ಬೊಲಾ’ (A Bola) ವರದಿ ಪ್ರಕಾರ, ತಂಡದ ಸಹ ಆಟಗಾರರು ತರಬೇತಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ರೊನಾಲ್ಡೊ ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ನ ವಾಹನದಲ್ಲಿ ಪಾರ್ಕೆನ್ ಸ್ಟೇಡಿಯಂನಿಂದ ಹೊರಟಿದ್ದರು.
ನಾರ್ವೆ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಗದಿದ್ದರಿಂದ ರೊನಾಲ್ಡೊ ಅಸಮಾಧಾನಗೊಂಡಿದ್ದರು ಎಂದು ಜೀಸಸ್ ಈ ಹಿಂದೆ ಹೇಳಿದ್ದರು. ಆದರೆ ಆ ವಿಚಾರ ಮುಗಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.
ರೊನಾಲ್ಡೊ ತರಬೇತಿ ಶಿಬಿರ ತೊರೆದಿರುವುದನ್ನು ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಕೂಡ ದೃಢಪಡಿಸಿದೆ. ಉಳಿದ ಆಟಗಾರರೊಂದಿಗೆ ಪೋರ್ಚುಗಲ್ ತಂಡ ಡೆನ್ಮಾರ್ಕ್ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ಮುಂದುವರಿಸಲಿದೆ.
►234 ಪಂದ್ಯ, 146 ಗೋಲು ಹೊಡೆದ ಆಟಗಾರ
ರೊನಾಲ್ಡೊ ಅವರ ಹೇಳಿಕೆಯ ಸಮಯವು ಅವರ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆಯೂ ಗಮನ ಸೆಳೆದಿದೆ.
ಪೋರ್ಚುಗಲ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ರೊನಾಲ್ಡೊ, 234 ಪಂದ್ಯಗಳಲ್ಲಿ 146 ಗೋಲು ಗಳಿಸಿದ್ದಾರೆ. ಈ ಮೂಲಕ ಅವರು ದಾಖಲೆಯ ಗೋಲ್ ಸ್ಕೋರರ್ ಆಗಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿದ್ದಾರೆ.
ತಮ್ಮ ವೃತ್ತಿಪರ ಫುಟ್ಬಾಲ್ ವೃತ್ತಿಜೀವನದ ಅಂತ್ಯದ ಸಾಧ್ಯತೆಯ ಬಗ್ಗೆಯೂ ರೊನಾಲ್ಡೊ ಇತ್ತೀಚೆಗೆ ಮಾತನಾಡಿದ್ದರು. ಆಗಸ್ಟ್ ನಲ್ಲಿ ಅವರು 2026ನೇ ವರ್ಷ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ತಮ್ಮ ಬಹುಶಃ ಕೊನೆಯ ವರ್ಷವಾಗಿರಬಹುದು ಎಂದು ಹೇಳಿದ್ದರು.
ಸೌಜನ್ಯ: Indiatoday. in






