ರೂಟ್ ಶತಕ; ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್
ಚೊಚ್ಚಲ ಪಂದ್ಯವಾಡಿದ ಆಕಾಶ್ ದೀಪ್ ಗೆ 3 ವಿಕೆಟ್

ಜೋ ರೂಟ್ | Photo: PTI
ರಾಂಚಿ: ಭಾರತದ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನವಾದ ಶುಕ್ರವಾರ ಪ್ರವಾಸಿ ಇಂಗ್ಲೆಂಡ್ ಜೋ ರೂಟ್ ಶತಕದ ನೆರವಿನಿಂದ ಉತ್ತಮ ಸ್ಥಿತಿಯಲ್ಲಿದೆ. ಅದು ತನ್ನ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ಗಳ ನಷ್ಟಕ್ಕೆ 302 ರನ್ ಗಳನ್ನು ಗಳಿಸಿದೆ.
ಜೋ ರೂಟ್ 226 ಎಸೆತಗಳಲ್ಲಿ 106 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರು ಏಕಾಂಗಿಯಾಗಿ ತಂಡವನ್ನು ಉತ್ತಮ ಸ್ಥಿತಿಯತ್ತ ಮುನ್ನಡೆಸಿದರು.
ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಮ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಮೊದಲ ದಿನದಾಟದ ಮುಕ್ತಾಯದ ವೇಳೆಗೆ, ರೂಟ್ ಮತ್ತು ಓಲೀ ರಾಬಿನ್ಸನ್ (31) ಕ್ರೀಸ್ನಲ್ಲಿದ್ದರು. ಆಕಾಶ್ ದೀಪ್ರ ಮಾರಕ ದಾಳಿಗೆ ಆರಂಭದಲ್ಲಿ ನಲುಗಿದರೂ, ಬಳಿಕ ಇಂಗ್ಲೆಂಡ್ ಅತ್ಯುತ್ತಮವಾಗಿ ಚೇತರಿಸಿಕೊಂಡಿತು.
ಭಾರತದ ಪರವಾಗಿ ಚೊಚ್ಚಲ ಪಂದ್ಯವಾಡಿದ ವೇಗಿ ಆಕಾಶ್ ದೀಪ್ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿ ಎದುರಾಳಿ ಆಟಗಾರರ ಮೇಲೆ ನಿಯಂತ್ರಣ ಸಾಧಿಸಿದರು.
ಮೂಲತಃ ಬಿಹಾರದವರಾಗಿರುವ 27 ವರ್ಷದ ಬಂಗಾಳಿ ವೇಗಿ ಆಕಾಶ್ ದೀಪ್ 17 ಓವರ್ ಗಳಲ್ಲಿ ಮೂರು ವಿಕೆಟ್ಗಳನ್ನು ಉರುಳಿಸಿದರು. ಅವರು ಹೊಸ ಚೆಂಡಿನಲ್ಲಿ ಇಂಗ್ಲೆಂಡ್ನ ಅಗ್ರ ಕ್ರಮಾಂಕಕ್ಕೆ ಸವಾಲಾಗಿ ಪರಿಣಮಿಸಿದರು. ಅವರು 10 ಎಸೆತಗಳ ಅಂತರದಲ್ಲಿ ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳನ್ನು ಉರುಳಿಸಿದರು. ಹಾಗಾಗಿ, ಇಂಗ್ಲೆಂಡ್ ತನ್ನ ಅರ್ಧದಷ್ಟು ಬ್ಯಾಟರ್ ಗಳನ್ನು ಮೊದಲ ಅವಧಿಯ ಆಟದ ವೇಳೆ ಕಳೆದುಕೊಂಡಿತು.
ಆದರೆ, ಆ ಬಳಿಕ ರೂಟ್ ಮೈದಾನಕ್ಕೆ ಅಂಟಿಕೊಂಡವರಂತೆ ದೃಢವಾದ ಆಟವಾಡಿದರು. ಅಂತಿಮವಾಗಿ ಅವರು ತನ್ನ 31ನೇ ಶತಕವನ್ನು ಬಾರಿಸಿದರು. ಇದು 15 ಇನಿಂಗ್ಸ್ಗಳಲ್ಲಿ ಅವರ ಮೊದಲ ಶತಕವಾಗಿದೆ. ಅವರ ಶತಕಗಳ ಪೈಕಿ 10 ಶತಕಗಳು ಭಾರತದ ವಿರುದ್ಧವೇ ಬಂದಿವೆ. ಇದು ದಾಖಲೆಯಾಗಿದೆ.
ರೂಟ್ ವಿಕೆಟ್ಕೀಪರ್ ಬೆನ್ ಫೋಕ್ಸ್ ಜೊತೆಗೆ 113 ರನ್ಗಳನ್ನು ಸೇರಿಸಿದರು. ಫೋಕ್ಸ್ 126 ಎಸೆತಗಳಲ್ಲಿ 47 ರನ್ಗಳನ್ನು ಗಳಿಸಿದರು.
ಇಂಗ್ಲೆಂಡ್ ಎರಡನೇ ಅವಧಿಯ ಆಟದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ಇದು ಈ ಸರಣಿಯಲ್ಲಿ ಮೊದಲ ಬಾರಿಯಾಗಿದೆ.
ಚಹಾ ವಿರಾಮದ ಬಳಿಕ, ಮುಹಮ್ಮದ್ ಸಿರಾಜ್ 2 ವಿಕೆಟ್ಗಳನ್ನು ಉರುಳಿಸಿದರು.







