ಜಿಟಿ ವಿರುದ್ಧ ಅನಪೇಕ್ಷಿತ ಸರ್ವಕಾಲಿಕ ದಾಖಲೆ ಸರಿಗಟ್ಟಿದ ಆರ್ಆರ್

Photo: x.com/EnglishSalar
ಜೈಪುರ: ಗುಜರಾತ್ ಟೈಟನ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಎದುರಾಳಿಗಳಿಗೆ 20 ಓವರ್ಗಳಲ್ಲಿ 229 ರನ್ ಬಿಟ್ಟುಕೊಡುವ ಮೂಲಕ ಅನಪೇಕ್ಷಿತ ದಾಖಲೆಯನ್ನು ಸೃಷ್ಟಿಸಿದೆ. ಪ್ರಸಕ್ತ ಸೀಸನ್ನಲ್ಲಿ ಎದುರಾಳಿಗಳಿಗೆ ಏಳನೇ ಬಾರಿಗೆ 200ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಕುಖ್ಯಾತಿಗೆ ಆರ್ಆರ್ ಪಾತ್ರವಾಗಿದೆ.
ಈ ಮೂಲಕ 2024ರಲ್ಲಿ ಒಂದೇ ಸೀಸನ್ನಲ್ಲಿ ಎದುರಾಳಿ ತಂಡಕ್ಕೆ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಸನ್ರೈಸರ್ಸ್ ಹೈದರಾಬಾದ್ ದಾಖಲೆಯನ್ನು ರಾಜಸ್ಥಾನ ರಾಯಲ್ಸ್ ಸರಿಗಟ್ಟಿದೆ. 2025ರಲ್ಲೂ ಆರ್ಆರ್ ತಂಡದ ವಿರುದ್ಧ ಬೇರೆ ತಂಡಗಳು 7 ಬಾರಿ 200ಕ್ಕಿಂತ ಹೆಚ್ಚು ರನ್ ಸಿಡಿಸಿದ್ದವು. ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಕೂಡಾ ಕಳೆದ ಐಪಿಎಲ್ ಋತುವಿನಲ್ಲಿ ಈ ಸಾಲಿಗೆ ಸೇರಿದ್ದವು. ಇದೀಗ ರಾಜಸ್ಥಾನ ರಾಯಲ್ಸ್ ಸತತ ಎರಡು ಸೀಸನ್ಗಳಲ್ಲಿ ಈ ಕುಖ್ಯಾತಿಗೆ ಪಾತ್ರವಾಗಿದೆ.
ಸಮತಟ್ಟಾದ ಪಿಚ್ನಲ್ಲಿ ಶುಭಮನ್ ಗಿಲ್ ಅವರ ಭರ್ಜರಿ ಅರ್ಧಶತಕ (44 ಎಸೆತಗಳಲ್ಲಿ 84 ರನ್) ಎದುರಾಳಿ ತಂಡದ ಪ್ರಾಬಲ್ಯಕ್ಕೆ ಕಾರಣವಾಯಿತು. ಇವರಿಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ 55 ರನ್ ಬಾರಿಸಿದರು. ರಾಹುಲ್ ತೆವಾಟಿಯಾ ಕೊನೆಯ ಓವರ್ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಪ್ರಸಕ್ತ ಸೀಸನ್ನಲ್ಲಿ ಜಿಟಿ ಗರಿಷ್ಠ ರನ್ ದಾಖಲಿಸಲು ಕಾರಣರಾದರು.
ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (4/33), ಜೇಸನ್ ಹೋಲ್ಡರ್ (3/12) ಹಾಗೂ ಕಗಿಸೊ ರಬಾಡಾ (2/33) ಎದುರಾಳಿ ಬ್ಯಾಟ್ಸ್ಮನ್ಗಳನ್ನು ಸಿಂಹಸ್ವಪ್ನವಾಗಿ ಕಾಡಿದರು. ಕೇವಲ 16.3 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆದ ಆರ್ಆರ್ ತಂಡ 77 ರನ್ಗಳ ಸೋಲೊಪ್ಪಿಕೊಂಡಿತು.






