ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವುತ್ತಿದೆ ಆರ್ ಆರ್ : ಸಂಗಕ್ಕಾರ

ವೈಭವ್ ಸೂರ್ಯವಂಶಿ | ಕುಮಾರ್ ಸಂಗಕ್ಕಾರ Photo: x.com/cricbuzz/icecric_news
ಹೊಸದಿಲ್ಲಿ: ಐಪಿಎಲ್ ಪ್ರಸಕ್ತ ಋತುವಿನಲ್ಲಿ ಯುವಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಹಾಗೂ ನಿರ್ಭೀತ ಬ್ಯಾಟಿಂಗ್ ಮೂಲಕ ಸದ್ದುಮಾಡುತ್ತಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಆರ್ ಆರ್ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಮೂಲಕ ಪವರ್ ಪ್ಲೇಯಲ್ಲಿ ತಂಡದ ಪ್ರಾಬಲ್ಯ ಮೆರೆಯಲು ಕಾರಣರಾಗುತ್ತಿದ್ದಾರೆ.
ಸೂರ್ಯವಂಶಿ ಇದುವರೆಗೆ ಪ್ರಸಕ್ತ ವರ್ಷ 12 ಇನಿಂಗ್ಸ್ಗಳಿಂದ 486 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದೆ. ಇವರ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ರಾಜಸ್ಥಾನ ತಂಡ 6 ಓವರ್ ಗಳಲ್ಲಿ 60ಕ್ಕಿಂತ ಹೆಚ್ಚು ರನ್ ಗಳಿಸುತ್ತಿದ್ದು, ಮಧ್ಯಮ ಕ್ರಮಾಂಕಕ್ಕೆ ಇನಿಂಗ್ಸ್ ಕಟ್ಟಲು ಭದ್ರ ಬುನಾದಿ ಒದಗಿಸಿಕೊಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 21 ಎಸೆತಗಳಲ್ಲಿ 46 ರನ್ ಸಿಡಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಆರ್ ಆರ್ ತಂಡ 1 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು.
ಅಭಿಷೇಕ್ ಶರ್ಮಾ 2024ರ ಐಪಿಎಲ್ನಲ್ಲಿ ನಿರ್ಮಿಸಿದ್ದ 42 ಸಿಕ್ಸರ್ ಗಳ ದಾಖಲೆಯನ್ನು ಸೂರ್ಯವಂಶಿ ರವಿವಾರದ ಪಂದ್ಯದಲ್ಲಿ ಹಿಂದಿಕ್ಕಿದರು. ಪ್ರಸಕ್ತ ಸೀಸನ್ನಲ್ಲಿ 43 ಸಿಕ್ಸರ್ ಸಿಡಿಸಿರುವ ಅವರು ಈ ಬಾರಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದು ಅವರ ನಿರ್ಭೀತ ಬ್ಯಾಟಿಂಗ್ಶೈಲಿಯನ್ನು ಬಿಂಬಿಸುತ್ತದೆ ಎಂದು ಯುವ ಆಟಗಾರನನ್ನು ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಮುಕ್ತಕಂಠದಿಂದ ಶ್ಲಾಘಿಸಿದರು.
"ಯಾವುದೇ ದಿನ 30ಕ್ಕಿಂತ ರನ್ ಗಳಿಸುತ್ತಿದ್ದು, ಅವರು ಅಗತ್ಯ ವೇಗ ನೀಡುತ್ತಿದ್ದಾರೆ. ಆದರೆ ನಾವು ನಿರೀಕ್ಷಿಸಿದಷ್ಟು ಅಥವಾ ಅವರ ಇಚ್ಛೆಯಷ್ಟು ರನ್ ಗಳಿಸುತ್ತಿಲ್ಲ ನಿಜ. ಆದರೆ ಅವರು ಚೆಂಡನ್ನು ಚೆನ್ನಾಗಿ ಹೊಡೆಯುತ್ತಾರೆ. ಈ ಮೂಲಕ ತಂಡಕ್ಕೆ ಅದ್ಭುತ ಆರಂಭ ಒದಗಿಸುತ್ತಿದ್ದಾರೆ. ಈ ಒತ್ತಡವನ್ನು ಮುಂದುರಿಸುವ ಮತ್ತು ಜತೆಯಾಟಗಳನ್ನು ವಿಸ್ತರಿಸುವ ಇತರ ಆಟಗಾರರು ಬೇಕು" ಎಂದು ವಿಶ್ಲೇಷಿಸಿದರು.
ಜತೆಗೆ ತಾಂತ್ರಿಕ ಸೂಚನೆಗಳ ಮೂಲಕ ಅವರ ಮೇಲೆ ಒತ್ತಡ ಹೆಚ್ಚಿಸುವುದನ್ನು ಆರ್ ಆರ್ ನಿಲ್ಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.






