ಭಾರತದ ಕೋಚಿಂಗ್ ವಿಭಾಗ ತೊರೆಯಲು ರಯಾನ್ ಟೆನ್ ಡೊಶೆಟ್ ನಿರ್ಧಾರ

ರಯಾನ್ ಟೆನ್ ಡೊಶೆಟ್ | Photo Credit : X
ಮುಂಬೈ, ಜು.14: ಭಾರತೀಯ ಪುರುಷರ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗವನ್ನು ತೊರೆಯಲು ನೆದರ್ಲ್ಯಾಂಡ್ಸ್ನ ಮಾಜಿ ಕ್ರಿಕೆಟಿಗ ರಯಾನ್ ಟೆನ್ ಡೊಶೆಟ್ ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಸೀಮಿತ ಓವರ್ ಕ್ರಿಕೆಟ್ ಸರಣಿ ಕೊನೆಗೊಂಡ ನಂತರ ಸಹಾಯಕ ಕೋಚ್ ಹುದ್ದೆಯನ್ನು ತ್ಯಜಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಡೊಶೆಟ್ ಅವರು ಫ್ರಾಂಚೈಸಿ ಕ್ರಿಕೆಟಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಅವರು ಈಗಾಗಲೇ ಕೆಲವು ತಂಡಗಳಿಂದ ಉತ್ತೇಜನಕಾರಿ ಪ್ರತಿಕ್ರಿಯೆ ಪಡೆದಿದ್ದಾರೆ.
ಡೊಶೆಟ್ ತನ್ನ ಉದ್ದೇಶವನ್ನು ಬಿಸಿಸಿಐಗೆ ತಿಳಿಸುವ ಸಾಧ್ಯತೆ ಇದೆ. ಕ್ರಿಕೆಟ್ ಮಂಡಳಿ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಇನ್ನಷ್ಟೇ ಇದಕ್ಕೆ ಸಮ್ಮತಿ ನೀಡಬೇಕಾಗಿದೆ.
‘‘ಕ್ರಿಕೆಟ್ ಮಂಡಳಿಯು ಅವರನ್ನು ಸಹಾಯ ಕೋಚ್ ಹುದ್ದೆಯಲ್ಲೇ ಮುಂದುವರಿಸಲು ಬಯಸಿದೆ. ಆದರೆ ಇದು ಅವರ ವೈಯಕ್ತಿಕ ನಿರ್ಧಾರ. ಅವರ ಮುಂದಿನ ಹೆಜ್ಜೆಯ ಕುರಿತು ಏನೇ ಹೇಳುವುದು ಅವಸರವಾಗುತ್ತದೆ’’ ಎಂದು ಮೂಲಗಳು ತಿಳಿಸಿವೆ.
ಡೊಶೆಟ್ ಅವರು ಗಂಭೀರ್ ಜೊತೆಗೆ ಎರಡು ವರ್ಷಗಳ ಹಿಂದೆ ಭಾರತೀಯ ಸಹಾಯಕ ಸಿಬ್ಬಂದಿ ವರ್ಗವನ್ನು ಸೇರಿಕೊಂಡಿದ್ದರು. ಅವರು ತನ್ನ ಆರಂಭಿಕ ಗುತ್ತಿಗೆ ಅವಧಿಯನ್ನು ಪೂರ್ಣಗೊಳಿಸಿದ್ದರು. ಡೊಶೆಟ್ ಅವರ ಕುಟುಂಬವು ಲಂಡನ್ನಲ್ಲಿ ನೆಲೆಸಿದ್ದು, 45ರ ವಯಸ್ಸಿನ ಮಾಜಿ ಕ್ರಿಕೆಟಿಗ ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ.
ಟಿ.ದಿಲಿಪ್ ಭಾರತೀಯ ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದ್ದು, ಬಿಸಿಸಿಐ ಅವರಿಗೆ ಮತ್ತೊಂದು ಅವಕಾಶ ನೀಡುವ ನಿರೀಕ್ಷೆ ಇದೆ.






