ಯುಎಸ್ ಓಪನ್ | ರಿಬಾಕಿನಾ ಚಾಂಪಿಯನ್ : ಸತತ 3ನೇ ಪ್ರಶಸ್ತಿ ಗೆಲ್ಲುವ ಸಬಲೆಂಕಾ ಮಹತ್ವಾಕಾಂಕ್ಷೆಗೆ ತಡೆ

ಸಬಲೆಂಕಾ - Photo Credit : usopen.org
ನ್ಯೂಯಾರ್ಕ್: ಸತತ ಮೂರನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಯನ್ನು ಗೆಲ್ಲುವ ಬೆಲಾರುಸ್ನ ಆರ್ಯನಾ ಸಬಲೆಂಕಾರ ಕನಸಿಗೆ ಕಝಖ್ಸ್ತಾನದ ಎಲೆನಾ ರಿಬಾಕಿನಾ ಶನಿವಾರ ತಣ್ಣೀರೆರಚಿದ್ದಾರೆ.
ಅದೂ ಅಲ್ಲದೆ, ರ್ಯಾಂಕಿಂಗ್ನಲ್ಲಿ ಸಬಲೆಂಕಾರನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ತಾನೇರಿದ್ದಾರೆ. ರಿಬಾಕಿನಾ ಸೆಮಿಫೈನಲ್ ತಲುಪಿದ ಬಳಿಕ, ಸಬಲೆಂಕಾರಿಂದ ಅಗ್ರ ಶ್ರೇಯಾಂಕವನ್ನು ಕಸಿದುಕೊಳ್ಳುವುದು ಖಚಿತವಾಗಿತ್ತು.
ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ರಿಬಾಕಿನಾ ತನ್ನ ಎದುರಾಳಿಯನ್ನು 6-4, 5-7, 6-2 ಸೆಟ್ಗಳಿಂದ ಸೋಲಿಸಿದರು. ಇದು ಅವರ ಮೂರನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
ಅವರು ತನ್ನ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು 2022ರ ವಿಂಬಲ್ಡನ್ನಲ್ಲಿ ಗೆದ್ದಿದ್ದರು ಹಾಗೂ ಈ ವರ್ಷದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಸಬಲೆಂಕಾರನ್ನು ಮಣಿಸಿ ಎರಡನೇ ಪ್ರಶಸ್ತಿ ಪಡೆದಿದ್ದರು.
‘‘ಇದು ಅದ್ಭುತವಾದ ಅನುಭವ. ಏನು ನಡೆಯಿತು ಎನ್ನುವುದನ್ನು ಅರಗಿಸಿಕೊಳ್ಳುವುದು ಇನ್ನೂ ಕಷ್ಟವಾಗುತ್ತಿದೆ. ಈ ಕೆಲವು ವಾರಗಳಲ್ಲಿ ಹಲವು ಸಾಧನೆಗಳು ನಡೆದಿವೆ. ನಾನು ಅತ್ಯಂತ ಸಂತೋಷವಾಗಿದ್ದೇನೆ. ಪಟ್ಟ ಶ್ರಮದ ಬಗ್ಗೆ ಹೆಮ್ಮೆ ಇದೆ. ನಿಜಕ್ಕೂ ಇದು ಅದ್ಭುತ’’ ಎಂದು ಗೆಲುವಿನ ಬಳಿಕ ಮಾತನಾಡಿದ ರಿಬಾಕಿನಾ ಹೇಳಿದರು.
ನ್ಯೂಯಾರ್ಕ್ನ ಫ್ಲಶಿಂಗ್ ಮೀಡೋಸ್ನಲ್ಲಿ ಸಬಲೆಂಕಾ ಅವರ 20 ಪಂದ್ಯಗಳ ಅಜೇಯ ಓಟಕ್ಕೆ ರಿಬಾಕಿನಾ ತೆರೆ ಎಳೆದರು. 2024 ಮತ್ತು 2025ರ ಚಾಂಪಿಯನ್ ಆಗಿರುವ ಸಬಲೆಂಕಾ, 2023ರ ಫೈನಲ್ನಲ್ಲಿ ಕೋಕೋ ಗೌಫ್ ವಿರುದ್ಧ ಸೋತಿದ್ದರು. ಆ ಬಳಿಕ, ಅವರು ಇಲ್ಲಿ ಯಾವುದೇ ಪಂದ್ಯವನ್ನು ಸೋತಿರಲಿಲ್ಲ.
‘‘ನಾನು ಇನ್ನೂ ಸ್ವಲ್ಪ ಉತ್ತಮವಾಗಿ ಆಡಬೇಕಿತ್ತು ಎಂದು ಅನಿಸುತ್ತಿದೆ. ಮುಂದಿನ ವರ್ಷ ನೋಡೋಣ’’ ಎಂದು ಆರ್ತರ್ ಆ್ಯಶ್ ಕ್ರೀಡಾಂಗಣದ ಪ್ರೇಕ್ಷಕರನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿದ ಸಬಲೆಂಕಾ ಹೇಳಿದರು.
ಕ್ರಿಸ್ ಎವರ್ಟ್ ಮತ್ತು ಸೆರೀನಾ ವಿಲಿಯಮ್ಸ್ ನಂತರ ಸತತ ಮೂರು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರು ಪ್ರಯತ್ನಿಸುತ್ತಿದ್ದರು.
ಹತಾಶೆಯಿಂದ ಮೈದಾನಕ್ಕೆ ರ್ಯಾಕೆಟ್ ಬಡಿದ ಸಬಲೆಂಕಾ!
ಸತತ ಮೂರನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದ್ದ ಆರ್ಯಾನಾ ಸಬಲೆಂಕಾರಿಗೆ ಸ್ವಲ್ಪ ಹೊತ್ತು ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ತನ್ನ ಈ ಬಾರಿಯ ಯುಎಸ್ ಅಭಿಯಾನವು ಸೋಲಿನೊಂದಿಗೆ ಮುಕ್ತಾಯಗೊಂಡ ರೀತಿ ಸಬಲೆಂಕಾರಿಗೆ ನುಂಗಲಾರದ ತುತ್ತಾಯಿತು. ಅವರು ತನ್ನ ಆಕ್ರೋಶವನ್ನು ಮೈದಾನದಲ್ಲೇ ಹೊರಹಾಕಿದರು.
ರಿಬಾಕಿನಾ ಚಾಂಪಿಯನ್ಶಿಪ್ ಗೆಲುವಿನ ಅಂಕ ಗಳಿಸಿದ ಬಳಿಕ, ಬೆಲಾರುಸ್ ಆಟಗಾರ್ತಿ ಸಬಲೆಂಕಾ ತನ್ನ ರ್ಯಾಕೆಟ್ಅನ್ನು ನೆಲಕ್ಕೆ ಬಡಿದರು.
ಅದೂ ಅಲ್ಲದೆ, ಸೋಲಿನ ನಂತರದ ತನ್ನ ಹತಾಶೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದ ಕ್ಯಾಮೆರಾಮನ್ ಮೇಲೆಯೂ ಅವರು ರೇಗಾಡಿದರು.
ಈ ಸೋಲಿನ ಜೊತೆಗೆ, ಸುದೀರ್ಘ 99 ವಾರಗಳ ಕಾಲ ತನ್ನ ಬಳಿಯೇ ಇಟ್ಟುಕೊಂಡಿದ್ದ ವಿಶ್ವದ ನಂ.1 ಸ್ಥಾನವನ್ನೂ ಕಳೆದುಕೊಂಡರು. ಅವರ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು.
ಆದರೆ, 28 ವರ್ಷದ ಸಬಲೆಂಕಾರ ಹತಾಶೆ ಹೆಚ್ಚು ಹೊತ್ತು ಇರಲಿಲ್ಲ. ಪಂದ್ಯದ ನಂತರ ಮಾತನಾಡಿದ ಅವರು, ಈ ಪಂದ್ಯಾವಳಿ ಮತ್ತು ಫೈನಲ್ನ ಸೋಲಿನಿಂದ ತಾನು ಸಾಕಷ್ಟು ಕಲಿತಿರುವುದಾಗಿ ಹೇಳಿದರು. ‘‘ಇನ್ನಷ್ಟು ಬಲಿಷ್ಠವಾಗಿ ಮರಳಲು ದೃಢನಿರ್ಧಾರ ಮಾಡಿದ್ದೇನೆ’’ ಎಂದರು.
ಹ್ಯಾರಿಸನ್- ಸ್ಕಪ್ಸ್ಕಿ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ
ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಶನಿವಾರ ಕ್ರಿಶ್ಚಿಯನ್ ಹ್ಯಾರಿಸನ್ ಮತ್ತು ನೀಲ್ ಸ್ಕಪ್ಸ್ಕಿ ಜೋಡಿ ಗೆದ್ದಿದೆ.
ಫೈನಲ್ನಲ್ಲಿ, ಅಮೆರಿಕದ ಹ್ಯಾರಿಸನ್ ಮತ್ತು ಬ್ರಿಟನ್ನ ಸ್ಕಪ್ಸ್ಕಿ ಜರ್ಮನಿಯ ಜೋಡಿ ಕೆವಿನ್ ಕ್ರವೀಟ್ಝ್ ಮತ್ತು ಟಿಮ್ ಪುಯೆಟ್ಝ್ರನ್ನು 6-4, 7-6 (8/6) ನೇರ ಸೆಟ್ಗಳಿಂದ ಸೋಲಿಸಿದರು.
ಇದು ಈ ಜೋಡಿಯ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು, ಅವರು ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು.
ಈ ಶತಮಾನದಲ್ಲಿ, ಒಂದೇ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಯುಎಸ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದ ಮೂರು ಜೋಡಿಗಳ ಪೈಕಿ ಈ ಜೋಡಿಯೂ ಒಂದಾಗಿದೆ. ಇದಕ್ಕೂ ಮೊದಲು, ಬಾಬ್ ಬ್ರಯಾನ್ ಮತ್ತು ಮೈಕ್ ಬ್ರಯಾನ್ ಹಾಗೂ ಜೇಮೀ ಮರ್ರೆ ಮತ್ತು ಬ್ರೂನೊ ಸೋರ್ಸ್ ಈ ಸಾಧನೆಯನ್ನು ಮಾಡಿದ್ದಾರೆ.
ಮರ್ರೆ ಮತ್ತು ಸೋರ್ಸ್ ತಮ್ಮ ಸಾಧನೆಯ 10ನೇ ವಾರ್ಷಿಕ ದಿನದಂದು, ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಶನಿವಾರ ವಿಜೇತರಿಗೆ ಪ್ರದಾನ ಮಾಡಿದರು.






