ಶಬರಿಮಲೆ ಚಿನ್ನ ಕಳವು ತನಿಖೆಯನ್ನು ಟೀಕಿಸುವವರು ಅಯೋಧ್ಯೆ ದೇಣಿಗೆ ಹಗರಣದ ಬಗ್ಗೆಯೂ ಮಾತನಾಡಲಿ: ಕೇರಳಂ ಸಚಿವ ಮುರಳೀಧರನ್ ‘ಸವಾಲು’

ಕೆ.ಮುರಳೀಧರನ್ | Photo Credit : PTI
ತಿರುವನಂತಪುರಂ, ಜೂ.28: ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವನ್ನು ದೂಷಿಸುವವರು ಅಯೋಧ್ಯೆಯ ಶ್ರೀರಾಮ ಮಂದಿರದ ವಿದ್ಯಮಾನಗಳನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಕೇರಳಂ ದೇವಸ್ವಂ ಹಾಗೂ ಆರೋಗ್ಯ ಸಚಿವ ಕೆ. ಮುರಳೀಧರನ್ ರವಿವಾರ ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ಪಲ್ಸ್ ಪೋಲಿಯೊ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಕೆಲವು ವ್ಯಕ್ತಿಗಳು ಪ್ರತಿದಿನವೂ ಶಬರಿಮಲೆಯ ಚಿನ್ನ ಕಳವು ಪ್ರಕರಣದ ಬಗ್ಗೆ ಮಾತನಾಡುತ್ತಿರುತ್ತಾರೆ. ಅವರ ಭಾವನೆಗಳು ನಮಗೆ ಅರ್ಥವಾಗುತ್ತವೆ. ಆದರೆ ಅದೇ ರೀತಿ ಅಯೋಧ್ಯೆಯಲ್ಲೂ ಭಕ್ತರಿದ್ದಾರೆ. ಅಯೋಧ್ಯೆಯ ಭಕ್ತರ ಭಾವನೆಗಳ ಬಗ್ಗೆ ಮಾತನಾಡುತ್ತಿದ್ದ ವ್ಯಕ್ತಿಗಳು ಇಂದು ದೇಶವನ್ನು ಆಳುತ್ತಿದ್ದಾರೆ’’ ಎಂದು ಯಾವುದೇ ಪಕ್ಷ ಅಥವಾ ಸಂಘಟನೆಯ ಹೆಸರನ್ನು ಉಲ್ಲೇಖಿಸದೆ ಹೇಳಿದರು.
ಕೇರಳ ಸರ್ಕಾರವನ್ನು ಟೀಕಿಸುವವರು, ಅಯೋಧ್ಯೆಯ ದೇವಾಲಯದಿಂದ ಚಿನ್ನವನ್ನು ಹೇಗೆ ಕಳವು ಮಾಡಲಾಗಿದೆ ಎಂಬುದನ್ನು ಕೂಡ ವಿವರಿಸಬೇಕೆಂದು ಅವರು ಹೇಳಿದರು.
ಏನಿದ್ದರೂ, ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡದ (SIT) ವರದಿಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಶಬರಿಮಲೆಯ ಅಯ್ಯಪ್ಪ ದೇವಾಲಯದ ಕಲಾಕೃತಿಗಳಿಂದ ಚಿನ್ನ ಕಾಣೆಯಾಗಿರುವುದಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಸೋಮವಾರ ಕೇರಳಂ ಹೈಕೋರ್ಟ್ಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದು, ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು. ಇಲ್ಲದಿದ್ದರೆ ತನ್ನ ಪಕ್ಷವು ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.






