ನೆಟ್ ಪ್ರಾಕ್ಟೀಸ್ ಗೆ ಮರಳಿದ ಭಾರತೀಯ ಕ್ರಿಕೆಟ್ ದಂತಕತೆ ಸಚಿನ್

PC : X
ಮುಂಬೈ : ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ನೆಟ್ ಪ್ರಾಕ್ಟೀಸ್ಗೆ ಮರಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ವೀಡಿಯೊವೊಂದರಲ್ಲಿ, ಸಚಿನ್ ನೆಟ್ನಲ್ಲಿ ಅಭ್ಯಾಸ ಮಾಡುತ್ತಿರುವುದು ಸೆರೆಯಾಗಿದೆ.
Look who we saw in the nets from our windows #MumbaiMeriJaan #MumbaiIndians pic.twitter.com/viHWkHIbC4
— Mumbai Indians (@mipaltan) February 4, 2025
ಇಂಟರ್ನ್ಯಾಶನಲ್ ಮಾಸ್ಟರ್ಸ್ ಲೀಗ್ನಲ್ಲಿ ಸಚಿನ್ ಭಾರತೀಯ ತಂಡದ ನಾಯಕತ್ವ ವಹಿಸಲಿದ್ದಾರೆ. ಪಂದ್ಯಾವಳಿಯು ಫೆಬ್ರವರಿ 22ರಿಂದ ಮಾರ್ಚ್ 16ರವರೆಗೆ ನಡೆಯಲಿದೆ.
‘‘ನಮ್ಮ ಕಿಟಕಿಗಳಿಂದ ನೆಟ್ನಲ್ಲಿ ನಾವು ಯಾರನ್ನು ನೋಡಿದ್ದೇವೆ ಎನ್ನುವುದನ್ನು ನೋಡಿ’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಸಂದೇಶದಲ್ಲಿ ಮುಂಬೈ ಇಂಡಿಯನ್ಸ್ ಬರೆದಿದೆ.
ಈ ಪಂದ್ಯಾವಳಿಯಲ್ಲಿ ಆಡುತ್ತಿರುವ ಇತರ ತಂಡಗಳೆಂದರೆ ಶ್ರೀಲಂಕಾ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.
ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಬ್ರಿಯಾನ್ ಲಾರಾ ವಹಿಸಿದರೆ, ಕುಮಾರ ಸಂಗಕ್ಕರ ಶ್ರೀಲಂಕಾ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಅದೇ ವೇಳೆ, ಜಾಕ್ ಕಾಲಿಸ್ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದಾರೆ. ಇಯೋನ್ ಮೋರ್ಗನ್ ಮತ್ತು ಶೇನ್ ವಾಟ್ಸನ್ ಕ್ರಮವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳನ್ನು ಮುನ್ನಡೆಸಲಿದ್ದಾರೆ.
ಭಾರತೀಯ ಬ್ಯಾಟಿಂಗ್ ತಾರೆ ಸುನೀಲ್ ಗವಾಸ್ಕರ್ರನ್ನು ಈ ಹಿರಿಯರ ಪಂದ್ಯಾವಳಿಯ ಕಮಿಶನರ್ ಆಗಿ ನೇಮಿಸಲಾಗಿದೆ.
ಸಚಿನ್ ತೆಂಡುಲ್ಕರ್ 2013 ನವೆಂಬರ್ನಲ್ಲಿ ತನ್ನ 39ನೇ ವರ್ಷ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಅವರು 100 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ ಏಕೈಕ ಕ್ರಿಕೆಟಿಗನಾಗಿದ್ದಾರೆ.