ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವನ್ನು ಭೇಟಿಯಾದ ಸಚಿನ್ ತೆಂಡುಲ್ಕರ್

Photo Credit : PTI
ಹೊಸದಿಲ್ಲಿ, ಡಿ.17: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರು ಇತ್ತೀಚೆಗೆ ಟಿ-20 ವಿಶ್ವಕಪ್ ಗೆದ್ದಿರುವ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವನ್ನು ಭೇಟಿಯಾದರು. ದೇಶಕ್ಕೆ ಕೀರ್ತಿ ತರುವಲ್ಲಿ ತಂಡದ ಪರಿಶ್ರಮ ಹಾಗೂ ಸಮರ್ಪಣೆಯನ್ನು ಶ್ಲಾಘಿಸಿದರು.
ತೆಂಡುಲ್ಕರ್ ಹಾಗೂ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ಸಂವಾದವು ಮಂಗಳವಾರ ಎಂಐಜಿ ಕ್ರಿಕೆಟ್ ಕ್ಲಬ್ನಲ್ಲಿ ನಡೆಯಿತು.
ಯಶಸ್ಸು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ನಿರೀಕ್ಷೆಗಳು ಹೆಚ್ಚಾಗುತ್ತವೆ. ಆ ನಿರೀಕ್ಷೆಯನ್ನು ಪೂರೈಸಲು ಇನ್ನೂ ಕಠಿಣ ಪರಿಶ್ರಮ ಹಾಗೂ ತೀಕ್ಷ್ಣವಾದ ಗಮನದ ಅಗತ್ಯವಿದೆ ಎಂದು ಆಟಗಾರ್ತಿಯರಿಗೆ ಸಚಿನ್ ನೆನಪಿಸಿದರು. ವಿಶ್ವಕಪ್ ಗೆಲುವು ದೀರ್ಘ ಪ್ರಯಾಣದ ಆರಂಭ ಎಂದು ಒತ್ತಿ ಹೇಳಿದರು ಎಂದು ಸಂಘಟಕರು ತಿಳಿಸಿದ್ದಾರೆ.
ನಾವು ಉತ್ಸಾಹ ಹಾಗೂ ನಂಬಿಕೆಯೊಂದಿಗೆ ಆಡಿದ್ದೇವೆ. ಸಚಿನ್ ತೆಂಡುಲ್ಕರ್ ಅವರ ಪ್ರೋತ್ಸಾಹದ ಮಾತುಗಳು ಹೃದಯವನ್ನು ತಟ್ಟಿದವು. ನಮ್ಮ ಹುರಿದುಂಬಿಸಿದ ತೆಂಡುಲ್ಕರ್ ಗೆ ಕೃತಜ್ಞತೆಗಳು ಎಂದು ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ. ಹೇಳಿದ್ದಾರೆ.





