ಇಂದು ಸ್ಯಾಫ್ ಚಾಂಪಿಯನ್ಶಿಪ್ ಫೈನಲ್: 9ನೇ ಪ್ರಶಸ್ತಿ ಮೇಲೆ ಭಾರತದ ಕಣ್ಣು

ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ ಫೈನಲ್ಗೆ ಮುನ್ನಾದಿನವಾದ ಸೋಮವಾರ ಟ್ರೋಫಿಯೊಂದಿಗೆ ಫೋಟೊಕ್ಕೆ ಪೋಸ್ ನೀಡಿದ ಭಾರತದ ಫುಟ್ಬಾಲ್ ಸಹಾಯಕ ಕೋಚ್ ಮಹೇಶ್ ಗಾವ್ಲಿ, ಡಿಫೆಂಡರ್ ಸಂದೇಶ್, ಕುವೈತ್ ಕೀಪರ್ ಬದರ್ ಬಿನ್ ಸನೌನ್ ಹಾಗೂ ಮುಖ್ಯ ಕೋಚ್ ರೂಯ್ ಬೆಂಟೊ.
ಹೊಸದಿಲ್ಲಿ, ಜು.3: ಸ್ಯಾಫ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮಂಗಳವಾರ ಬಲಿಷ್ಠ ಕುವೈತ್ ತಂಡವನ್ನು ಎದುರಿಸಲಿರುವ ಹಾಲಿ ಚಾಂಪಿಯನ್ ಭಾರತ ತನ್ನ ಉತ್ತಮ ದಾಖಲೆಯನ್ನು ಕಾಯ್ದುಕೊಂಡು 9ನೇ ಪ್ರಶಸ್ತಿ ಬಾಚಿಕೊಳ್ಳುವ ಗುರಿ ಇಟ್ಟುಕೊಂಡಿದೆ.
ಭಾರತವು ಸೆಮಿ ಫೈನಲ್ನಲ್ಲಿ ಲೆಬಾನಾನ್ ತಂಡದಿಂದ ಕಠಿಣ ಸವಾಲು ಎದುರಿಸಿತ್ತು. ಪಂದ್ಯದ ಫಲಿತಾಂಶವು ಪೆನಾಲ್ಟಿ ಶೂಟೌಟ್ನಲ್ಲಿ ನಿರ್ಧಾರವಾಗಿದ್ದು, ಭಾರತವು 4-2 ಅಂತರದಿಂದ ಜಯ ಸಾಧಿಸಿತ್ತು. ಅದೇ ರೀತಿ ಕುವೈತ್ ಕೂಡ ಮತ್ತೊಂದು ಸೆಮಿ ಫೈನಲ್ನಲ್ಲಿ ಹೆಚ್ಚುವರಿ ಸಮಯದಲ್ಲಿ ಬಾಂಗ್ಲಾದೇಶ ವಿರುದ್ಧ 1-0 ಅಂತರದಿಂದ ಗೆಲುವು ದಾಖಲಿಸಿತ್ತು.
ಭಾರತ ಹಾಗೂ ಕುವೈತ್ ಟೂರ್ನಮೆಂಟ್ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ‘ಎ’ ಗುಂಪಿನಲ್ಲಿ ಆಡಿರುವ ಪಂದ್ಯದಲ್ಲಿ ಉಭಯ ತಂಡಗಳು 1-1ರಿಂದ ಡ್ರಾ ಸಾಧಿಸಿದ್ದವು.
ಬೆಂಗಳೂರಿನ ಕಂಠೀರವ ಸ್ಟೇಡಿಯಮ್ನಲ್ಲಿ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಆಡಲಿರುವ ಭಾರತ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಸತತ ಪಂದ್ಯಗಳಿಂದ ಆಟಗಾರರು ದಣಿದಿರುವುದು ಕಳವಳಕಾರಿ ವಿಚಾರವಾಗಿದೆ.
ಈ ಕುರಿತು ಮಾತನಾಡಿದ ಭಾರತದ ಸಹಾಯಕ ಕೋಚ್ ಮಹೇಶ್ ಗಾವ್ಲಿ, ನಿಮಗೆ ಒಂದು ವಾರ ಲಭಿಸಿದರೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಿಮಗೆ ಒಂದು ತಿಂಗಳು ಇಲ್ಲವೇ ಅದಕ್ಕಿಂತ ಹೆಚ್ಚು ಸಮಯ ಲಭಿಸಿದರೆ ಫಿಟ್ನೆಸ್ ಕುರಿತು ಹೆಚ್ಚು ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
ಫೈನಲ್ ಪಂದ್ಯಕ್ಕೆ ಪ್ರಮುಖ ಡಿಫೆಂಡರ್ ಸಂದೇಶ್ ಜಿಂಗಾನ್ ಲಭ್ಯವಿರಲಿದ್ದು, ಇದು ಭಾರತದ ಹುಮ್ಮಸ್ಸನ್ನು ಹೆಚ್ಚಿಸಿದೆ. ಮೊದಲಿಗೆ ಪಾಕಿಸ್ತಾನ ಹಾಗೂ ಆ ನಂತರ ಕುವೈತ್ ವಿರುದ್ಧ ಪಂದ್ಯಗಳಲ್ಲಿ ಹಳದಿ ಕಾರ್ಡ್ ಪಡೆದ ಕಾರಣ ಸಂದೀಪ್ ಲೆಬನಾನ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ.
ಸಂದೇಶ್ ಬದಲಿಗೆ ಸೆಮಿ ಫೈನಲ್ನಲ್ಲಿ ಅನ್ವರ್ ಅಲಿ ಆಡಿದ್ದರು. ಲೆಬನಾನ್ ವಿರುದ್ಧ ಅಲಿ ಉತ್ತಮ ಪ್ರದರ್ಶನ ನೀಡಿದ್ದರು.
ಸ್ಯಾಫ್ ಶಿಸ್ತು ಸಮಿತಿಯಿಂದ ಎರಡು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿರುವ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಈ ಪಂದ್ಯದಲ್ಲಿ ಅವರು ಡಗ್ಔಟ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಸ್ಟಿಮ್ಯಾಕ್ ಪಾಕಿಸ್ತಾನದ ವಿರುದ್ಧ ಭಾರತ ಆಡಿರುವ ಟೂರ್ನಮೆಂಟ್ನ ಮೊದಲ ಪಂದ್ಯ ಹಾಗೂ ಕುವೈತ್ ವಿರುದ್ಧದ 2ನೇ ಪಂದ್ಯದಲ್ಲಿ ರೆಡ್ ಕಾರ್ಡ್ ಸ್ವೀಕರಿಸಿದ್ದರು. ಆದಾಗ್ಯೂ ಭಾರತವು ಸುನೀಲ್ ಚೆಟ್ರಿ ಅವರ ದಕ್ಷ ನಾಯಕತ್ವದಲ್ಲಿ ಎಲ್ಲ ಅಡೆತಡೆಯನ್ನು ಮೀರಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಸ್ಯಾಫ್ ಚಾಂಪಿಯನ್ಶಿಪ್ನ ಗ್ರೂಪ್ ಹಂತದಲ್ಲಿ ಸತತ 3 ಪಂದ್ಯಗಳಲ್ಲಿ ಗೋಲು ಗಳಿಸಿದ್ದ ಚೆಟ್ರಿ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಎನಿಸಿದ್ದಾರೆ. ಚೆಟ್ರಿ ಅವರು ಲೆಬನಾನ್ ವಿರುದ್ಧದ ಸೆಮಿ ಫೈನಲ್ನಲ್ಲಿ ನಿಗದಿತ ಸಮಯದ ಆಟದಲ್ಲಿ ಗೋಲು ಗಳಿಸುವಲ್ಲಿ ವಿಫಲರಾಗಿದ್ದರು. ಶೂಟೌಟ್ನಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಸ್ಟ್ರೈಕರ್ ಚೆಟ್ರಿ ಫೈನಲ್ ಪಂದ್ಯದಲ್ಲಿ ಪ್ರಮುಖ ಕಾಣಿಕೆ ನೀಡುವ ಸಾಧ್ಯತೆಯಿದೆ.
ಭಾರತ ಸಹಾಲ್ ಅಬ್ದುಲ್ ಸಮದ್, ಮಹೇಶ್ ಸಿಂಗ್ ಹಾಗೂ ಉದಾಂತ ಸಿಂಗ್ ಮೈದಾನದಲ್ಲಿ ಚುರುಕಿನಿಂದ ಆಡುವ ವಿಶ್ವಾಸದಲ್ಲಿದೆ.