91ನೇ ಅಂತರ್ರಾಷ್ಟ್ರೀಯ ಗೋಲು ಗಳಿಸಿದ ಸುನೀಲ್ ಚೆಟ್ರಿ
ಸ್ಯಾಫ್ ಚಾಂಪಿಯನ್ಶಿಪ್: ಭಾರತ ಸೆಮಿ ಫೈನಲ್ ಗೆ

ಬೆಂಗಳೂರು: ಸ್ಯಾಫ್ ಚಾಂಪಿಯನ್ಶಿಪ್ನ ‘ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಸುನೀಲ್ ಚೆಟ್ರಿ ನೇತೃತ್ವದ 8 ಬಾರಿಯ ಚಾಂಪಿಯನ್ ಭಾರತವು ಶನಿವಾರ ನೇಪಾಳದ ವಿರುದ್ಧ 2-0 ಅಂತರದಿಂದ ಗೆಲುವು ದಾಖಲಿಸಿದೆ.
2ರಲ್ಲಿ ಜಯ ಸಾಧಿಸಿ ಆರು ಅಂಕ ಗಳಿಸಿರುವ ಭಾರತ ‘ಎ’ ಗುಂಪಿನಿಂದ ಕುವೈಟ್ ಜೊತೆಗೆ ಸೆಮಿ ಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿದೆ.
ಸುನೀಲ್ ಚೆಟ್ರಿ ಹಾಗೂ ಮಹೇಶ್ ಸಿಂಗ್ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿ ಭಾರತವು ಸತತ 2ನೇ ಪಂದ್ಯ ಜಯಿಸಲು ನೆರವಾದರು.
ಇದಕ್ಕೂ ಮೊದಲು ಕುವೈತ್ ತಂಡ ಪಾಕಿಸ್ತಾನವನ್ನು 4-0 ಅಂತರದಿಂದ ಮಣಿಸಿ ಅಂತಿಮ-4ರ ಸುತ್ತು ತಲುಪಿದ ಮೊದಲ ತಂಡ ಎನಿಸಿಕೊಂಡಿತು. ಟೂರ್ನಿಯಲ್ಲಿ ಸ್ಪರ್ಧೆಯಿಂದ ಹೊರಬಿದ್ದಿರುವ ಪಾಕಿಸ್ತಾನ ಹಾಗೂ ನೇಪಾಳ ಮಂಗಳವಾರ ಮುಖಾಮುಖಿಯಾಗಲಿವೆ.
ಭಾರತವು ಜೂನ್ 27ರಂದು ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಕುವೈತ್ ತಂಡವನ್ನು ಎದುರಿಸಲಿದೆ.
ಸುನೀಲ್ ಚೆಟ್ರಿ 62ನೇ ನಿಮಿಷದಲ್ಲಿ ವೃತ್ತಿಜೀವನದಲ್ಲಿ 91ನೇ ಅಂತರ್ರಾಷ್ಟ್ರೀಯ ಗೋಲು ಗಳಿಸಿದರು. ಈ ಮೂಲಕ ಸಾರ್ವಕಾಲಿಕ ಅಗ್ರ ಅಂತರ್ರಾಷ್ಟ್ರೀಯ ಗೋಲ್ ಸ್ಕೋರರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಮೊದಲಾರ್ಧದಲ್ಲಿ ಶಾಂತಚಿತ್ತದಿಂದ ಆಡಿದ ಚೆಟ್ರಿ ದ್ವಿತೀಯಾರ್ಧದಲ್ಲಿ ಮಹೇಶ್ ಸಿಂಗ್ ನೀಡಿದ ಕ್ರಾಸ್ನ ಲಾಭ ಪಡೆದು ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಚೆಟ್ರಿ ಟೂರ್ನಮೆಂಟ್ನಲ್ಲಿ ನಾಲ್ಕನೇ ಗೋಲು ಗಳಿಸಿದರು. ಮಹೇಶ್ ಸಿಂಗ್ 70ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ 2-0 ಮುನ್ನಡೆ
ಒದಗಿಸಿಕೊಟ್ಟರು.
172ನೇ ರ್ಯಾಂಕಿನ ನೇಪಾಳ ಮೊದಲಾವಧಿಯ ಮಧ್ಯಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತು. ಕೆಲವು ದಾಳಿಗಳ ಮೂಲಕ ಭಾರತದ ರಕ್ಷಣಾಕೋಟೆಗೆ ಸವಾಲೊಡ್ಡಿತು.
ಭಾರೀ ಮಳೆಯೊಂದಿಗೆ ಪಂದ್ಯ ಆರಂಭವಾಯಿತು. ಪಂದ್ಯ ಆರಂಭಕ್ಕೂ ಮೊದಲು ಮೈದಾನದ ಸಿಬ್ಬಂದಿ ಕಾರಂಜಿಗಳನ್ನು ಬಳಸಿದ್ದರಿಂದ ಮಳೆ ಆಗಮನದಿಂದಾಗಿ ಟರ್ಫ್ ಹೆಚ್ಚು ಜಾರುವಂತೆ ಮಾಡಿತು.
ಭಾರತ ಮೊದಲ 20 ನಿಮಿಷಗಳಲ್ಲಿ ಎರಡು ಬಾರಿ ಮುನ್ನಡೆಯ ಸಮೀಪ ತಲುಪಿತ್ತು. ಎರಡೂ ಸಂದರ್ಭದಲ್ಲಿ ಸಹಾಲ್ ಅಬ್ದುಲ್ ಸಮದ್ ಗೋಲು ಗಳಿಸುವಲ್ಲಿ ವಿಫಲರಾದರು.
ನೇಪಾಳ 18ನೇ ನಿಮಿಷದಲ್ಲಿ ಗೋಲು ಗಳಿಸುವ ವಿಶ್ವಾಸದಲ್ಲಿತ್ತು. ಅರಿಕ್ ಬಿಸ್ಟಾ ಭಾರತದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧುಗೆ ಕಠಿಣ ಸವಾಲೊಡ್ಡಿದರು. ಸಂಧು ಗೋಲು ದಾಖಲಾಗದಂತೆ ನೋಡಿಕೊಂಡರು.
ಇದೇ ವೇಳೆ, ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ ತಲುಪುವ ಪಾಕಿಸ್ತಾನದ ವಿಶ್ವಾಸಕ್ಕೆ ಹಿನ್ನಡೆಯಾಗಿದೆ. ಪಾಕ್ ತಂಡವು ಕುವೈತ್ ವಿರುದ್ಧ 0-4 ಅಂತರದಿಂದ ಸೋಲುಂಡಿದೆ. 2 ಪಂದ್ಯಗಳಲ್ಲಿ 2 ಬಾರಿ ಸೋತಿರುವ ಪಾಕಿಸ್ತಾನವು ಟೂರ್ನಮೆಂಟ್ನಿಂದ ನಿರ್ಗಮಿಸಿದೆ.