ಎಸ್ಎಎಫ್ಎಫ್ ಅಂಡರ್-17 ಚಾಂಪಿಯನ್ಶಿಪ್ : ಚರ್ಚೆಗೆ ಗ್ರಾಸವಾದ ಪಾಕ್ ಫುಟ್ಬಾಲ್ ಆಟಗಾರನ ವರ್ತನೆ

PC : X \ @sporttify
ಕೊಲಂಬೊ, ಸೆ. 23: ಭಾರತ ಮತ್ತು ಪಾಕಿಸ್ತಾನದ ನಡುವೆ ನೆಲೆಸಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಈ ದೇಶಗಳ ಕ್ರೀಡಾ ತಂಡಗಳು ಮುಖಾಮುಖಿಯಾಗುವ ಪಂದ್ಯಗಳು ಆಟಗಾರರ ಅತಿರೇಕದ ಭಾವನೆಗಳಿಗೆ ಸಾಕ್ಷಿಯಾಗುತ್ತಿವೆ. ಪ್ರಸಕ್ತ ದುಬೈಯಲ್ಲಿ ನಡೆಯುತ್ತಿರುವ ಟಿ20 ಏಶ್ಯ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ ಮತ್ತು ಆ ಎರಡೂ ಪಂದ್ಯಗಳು ಅತ್ಯಂತ ವಿವಾದಾಸ್ಪದವಾದವು.
ಈಗ ಈ ಪ್ರವೃತ್ತಿಯು ಕ್ರಿಕೆಟ್ನಿಂದ ಫುಟ್ಬಾಲ್ ಮೈದಾನವನ್ನೂ ಆವರಿಸಿದೆ. ಕೊಲಂಬೊದಲ್ಲಿ ನಡೆಯುತ್ತಿರುವ ಎಸ್ಎಎಫ್ಎಫ್ ಅಂಡರ್-17 ಚಾಂಪಿಯನ್ಶಿಪ್ನಲ್ಲಿ, ಸೋಮವಾರ ಭಾರತವು ಪಾಕಿಸ್ತಾನವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿದೆ. ಭಾವಾವೇಶದಿಂದ ಕೂಡಿದ ಪಂದ್ಯದಲ್ಲಿ, ಪಾಕಿಸ್ತಾನ ತಂಡದ ಮುಹಮ್ಮದ್ ಅಬ್ದುಲ್ಲಾರ ವಿವಾದಾಸ್ಪದ ಸಂಭ್ರಮಾಚರಣೆಯು ಎಲ್ಲರ ಗಮನ ಸೆಳೆದಿದೆ.
Cricket wasn’t enough, now ignorance shown in football too 🤦♂️
— Sporttify (@sporttify) September 22, 2025
Pakistan’s antics after a goal were embarrassing — and poetic justice followed.
India beats Pakistan 3-2 in SAFF U-17.
Class > Clownery. 🇮🇳pic.twitter.com/IgmfV6vdHv#INDvPAK #SAFFU17 #Football
ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವುದರಿಂದ ಸೋಮವಾರದ ಪಂದ್ಯಕ್ಕೆ ಮಹತ್ವವಿರಲಿಲ್ಲ. ಪಂದ್ಯದ 31ನೇ ನಿಮಿಷದಲ್ಲಿ ಭಾರತವು ದಲಾಲ್ಮುವೋನ್ ಗಾಂಗ್ಟೆ ಗೋಲಿನ ಮೂಲಕ ಮುನ್ನಡೆ ಪಡೆಯಿತು.
43ನೇ ನಿಮಿಷದಲ್ಲಿ, ಅಬ್ದುಲ್ಲಾ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಮೂಲಕ ಅಂಕ ಪಟ್ಟಿಯನ್ನು ಸಮಬಲಗೊಳಿಸಿದರು. ಈ ಗೋಲು ಬಾರಿಸಿದ ಬಳಿಕ ಅವರು ಕಾರ್ನರ್ಗೆ ಓಡಿ ಕುಳಿತುಕೊಂಡರು. ಬಳಿಕ ತಂಡದ ಇತರ ಸದಸ್ಯರೊಂದಿಗೆ ಸೇರಿಕೊಂಡು ಚಹಾ ಕುಡಿಯುವಂತೆ ಅಭಿನಯಿಸುವ ಮೂಲಕ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.
ಆದರೆ, ಅಂತಿಮವಾಗಿ ಪಂದ್ಯವನ್ನು ಗೆಲ್ಲುವ ಮೂಲಕ ಭಾರತವು ತನ್ನ ಪ್ರಾಬಲ್ಯವನ್ನು ತೋರಿಸಿತು.
ದುಬೈಯಲ್ಲಿ ರವಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಶ್ಯ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನದ ಕ್ರಿಕೆಟಿಗರಾದ ಹಾರಿಸ್ ರವೂಫ್ ಮತ್ತು ಸಾಹಿಬ್ಝಾದ ಫರ್ಹಮ್ ಪ್ರಚೋದನಾತ್ಮಕ ಸಂಜ್ಞೆಗಳನ್ನು ತೋರಿಸಿದ ಒಂದು ದಿನದ ಬಳಿಕ ಕೊಲಂಬೊದಲ್ಲಿ ಪಾಕಿಸ್ತಾನದ ಫುಟ್ಬಾಲ್ ಆಟಗಾರ ಅಂಥದೇ ವರ್ತನೆಯನ್ನು ಪುನರಾವರ್ತಿಸಿದ್ದಾರೆ.







