ಐಸಿಸಿ ಟಿ-20 ರ್ಯಾಂಕಿಂಗ್| ಅಭಿಷೇಕ್ ಅಗ್ರ ಸ್ಥಾನ ಭದ್ರ, 2ನೇ ಸ್ಥಾನಕ್ಕೇರಿದ ಫರ್ಹಾನ್

Photo : PTI
ದುಬೈ,ಮಾ.4: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬುಧವಾರ ಬಿಡುಗಡೆಯಾಗಿರುವ ಪುರುಷರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಝದಾ ಫರ್ಹಾನ್ ಇತ್ತೀಚೆಗೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅವಳಿ ಶತಕಗಳನ್ನು ಗಳಿಸಿದ ಕಾರಣ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಭಿಷೇಕ್ಗೆ ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ.
ಬಲಗೈ ಬ್ಯಾಟರ್ ಫರ್ಹಾನ್ ಒಂದೇ ಆವೃತ್ತಿಯ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗನಾಗಿದ್ದಾರೆ. ಪಲ್ಲೆಕೆಲೆಯಲ್ಲಿ ನಡೆದಿದ್ದ ಅಂತಿಮ ಸೂಪರ್-8 ಪಂದ್ಯದಲ್ಲಿ ಫರ್ಹಾನ್ ಶ್ರೀಲಂಕಾದ ವಿರುದ್ಧ ತನ್ನ ಎರಡನೇ ಶತಕ ದಾಖಲಿಸಿದ್ದರು. ಈ ಸಾಧನೆಯ ಮೂಲಕ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದು, ಜೀವನಶ್ರೇಷ್ಠ ರೇಟಿಂಗ್ ಪಡೆದಿದ್ದಾರೆ.
ಫರ್ಹಾನ್ಗಿಂತ 26 ಅಂಕದಿಂದ ಮುಂದಿರುವ ಅಭಿಷೇಕ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವಿಶ್ವಕಪ್ನಲ್ಲಿ 383 ರನ್ ಗಳಿಸಿರುವ ಇಂಗ್ಲೆಂಡ್ನ ಫಿಲ್ ಸಾಲ್ಟ್ರನ್ನು ಹಿಂದಿಕ್ಕಿರುವ ಪಾಕಿಸ್ತಾನದ ಬ್ಯಾಟರ್ ಫರ್ಹಾನ್ ಸದ್ಯ 848 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ.
ಭಾರತದ ಬ್ಯಾಟರ್ ಇಶಾನ್ ಕಿಶನ್ 783 ರೇಟಿಂಗ್ ಪಾಯಿಂಟ್ಸ್ನೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ. 749 ಅಂಕ ಗಳಿಸಿರುವ ತಿಲಕ್ ವರ್ಮಾ ಆರನೇ ಸ್ಥಾನಕ್ಕೇರಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಎಂಟನೇ ಸ್ಥಾನದಲ್ಲಿದ್ದಾರೆ.
ಟಿ-20 ವಿಶ್ವಕಪ್ನಲ್ಲಿ ಒಟ್ಟು 292 ರನ್ ಗಳಿಸಿರುವ ಝಿಂಬಾಬ್ವೆ ತಂಡದ ಬ್ರಿಯಾನ್ ಬೆನೆಟ್ ಆರು ಸ್ಥಾನ ಭಡ್ತಿ ಪಡೆದು 11ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್ಗಳಾದ ರಯಾನ್ ರಿಕೆಲ್ಟನ್ ಹಾಗೂ ಮರ್ಕ್ರಮ್ ಕ್ರಮವಾಗಿ 13ನೇ ಹಾಗೂ 16ನೇ ಸ್ಥಾನಕ್ಕೇರಿದ್ದಾರೆ.
ಟಿ-20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಟಿ-20 ವಿಶ್ವಕಪ್ನಲ್ಲಿ ಚಕ್ರವರ್ತಿ ಈ ತನಕ 12 ವಿಕೆಟ್ಗಳನ್ನು ಪಡೆದಿದ್ದಾರೆ. ಎರಡು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ತಲುಪಿರುವ ಪಾಕಿಸ್ತಾನದ ಅಬ್ರಾರ್ ಅಹ್ಮದ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಇತರ ಬೌಲರ್ಗಳ ಪೈಕಿ ಭಾರತದ ಜಸ್ಪ್ರಿತ್ ಬುಮ್ರಾ ಏಳನೇ, ಅರ್ಷದೀಪ ಸಿಂಗ್ ಆರು ಸ್ಥಾನ ಮೇಲಕ್ಕೇರಿ 13ನೇ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್ನ ಲಿಯಾಮ್ ಡಾಸನ್ 9 ಸ್ಥಾನ ಭಡ್ತಿ ಪಡೆದು 14ನೇ ಸ್ಥಾನ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಗಿಡಿ ಆರು ಸ್ಥಾನ ಮೇಲಕ್ಕೇರಿ 20ನೇ ರ್ಯಾಂಕಿಗೆ ತಲುಪಿದ್ದಾರೆ.
ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ ಒಂದು ಸ್ಥಾನ ಮೇಲಕ್ಕೇರಿ ಎರಡನೇ ಸ್ಥಾನ ಪಡೆದರು. ವಿಶ್ವಕಪ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವೆಸ್ಟ್ಇಂಡೀಸ್ನ ಹಿರಿಯ ಆಟಗಾರ ಜೇಸನ್ ಹೋಲ್ಡರ್ ಎಂಟು ಸ್ಥಾನ ಭಡ್ತಿ ಪಡೆದು 11ನೇ ಸ್ಥಾನ ತಲುಪಿದ್ದಾರೆ.






