ಈ ವರ್ಷದ ಐಪಿಎಲ್ನಲ್ಲಿ ಮಿಂಚುತ್ತಿರುವ ಗುಜರಾತ್ ಬ್ಯಾಟರ್ ಸಾಯಿ ಸುದರ್ಶನ್

ಸಾಯಿ ಸುದರ್ಶನ್ | PC : PTI
ಹೊಸದಿಲ್ಲಿ: ತನ್ನ ನೈಜ ಆಟದ ಶೈಲಿಯನ್ನು ಕಳೆದುಕೊಳ್ಳದೆ ಟಿ-20 ಕ್ರಿಕೆಟ್ನ ಬೇಡಿಕೆಗಳನ್ನು ಪೂರೈಸಲು ಆಟದ ತಾಂತ್ರಿಕ ಅಂಶಗಳ ಮೇಲೆ ವ್ಯಾಪಕವಾಗಿ ಕೆಲಸ ಮಾಡುತ್ತಿದ್ದೇನೆಂದು ಈ ಋತುವಿನ ಆರಂಭದಲ್ಲಿ ಆಂಗ್ಲಪತ್ರಿಕೆಗೆ ತಿಳಿಸಿದ್ದ ಗುಜರಾಟ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅವರು ಸದ್ಯ ಅಬ್ಬರದ ಬ್ಯಾಟಿಂಗ್ನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಾಯಿ ಸುದರ್ಶನ್ ಬೌಲರ್ ಕುಲದೀಪ್ ಯಾದವ್ ತಲೆ ಮೇಲಿಂದ ಸಿಕ್ಸರ್ ಸಿಡಿಸುವ ಮೂಲಕ ಮೂರಂಕೆಯ ಸ್ಕೋರನ್ನು ದಾಟಿದರು. ಸಿಕ್ಸರ್ ಸಿಡಿಸುವ ಮೂಲಕ ಗುಜರಾತ್ ರನ್ ಚೇಸ್ಗೆ ಅಂತಿಮ ಸ್ಪರ್ಶ ನೀಡಿದರು. ಒಟ್ಟು 617 ರನ್ ಗಳಿಸಿರುವ ಸುದರ್ಶನ್ 2025ರ ಆವೃತ್ತಿಯ ಐಪಿಎಲ್ನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
156.99ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಸುದರ್ಶನ್, ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಈ ಋತುವೊಂದರಲ್ಲ್ ಅತ್ಯಧಿಕ ಬೌಂಡರಿಗಳು(68)ಹಾಗೂ ಸಿಕ್ಸರ್ಗಳನ್ನು(20)ಬಾರಿಸಿದ್ದಾರೆ.
ಕಳೆದ ವರ್ಷ ಭಾರತ ‘ಎ’ತಂಡದೊಂದಿಗೆ ಆಸ್ಟ್ರೇಲಿಯದಲ್ಲಿದ್ದ ಸಾಯಿ ಸುದರ್ಶನ್ ತನ್ನ ಟಿ-20 ಬ್ಯಾಟಿಂಗ್ನತ್ತ ಗಮನ ನೀಡಲು ಪವರ್-ಹಿಟ್ಟಿಂಗ್ ಕೋಚ್ ಶನೊನ್ ಯಂಗ್ರನ್ನು ಭೇಟಿಯಾಗಿದ್ದರು. ಸ್ಪೆಷಲಿಷ್ಟ್ ಪವರ್-ಹಿಟ್ಟಿಂಗ್ ಕೋಚ್ ಯಂಗ್ ಅವರು ಗ್ಲೆನ್ ಮ್ಯಾಕ್ಸ್ವೆಲ್, ಮಾರ್ನಸ್ ಲ್ಯಾಬುಶೇನ್, ಬಾಬರ್ ಆಝಮ್ ಹಾಗೂ ಜೇಕ್ ಫ್ರೆಸರ್-ಮೆಕ್ಗರ್ಕ್ ಅವರೊಂದಿಗೆ ಕೆಲಸ ಮಾಡಿದ್ದರು. ತಮಿಳುನಾಡಿನ ಎಡಗೈ ಬ್ಯಾಟರ್ ಸುದರ್ಶನ್ರನ್ನು ಮೆಲ್ಬರ್ನ್ನಲ್ಲಿರುವ ತಮ್ಮ ಕ್ರಿಕೆಟ್ ಫರ್ಫಾಮೆನ್ಸ್ ಲ್ಯಾಬ್ಗೆ ಆಹ್ವಾನಿಸಿದ್ದರು.







