ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಸಾಯಿ ಸುದರ್ಶನ್

ಲಂಡನ್: ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಆತಿಥೇಯ ದೇಶದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ತನ್ನ ಚೊಚ್ಚಲ ಪಂದ್ಯ ಆಡುತ್ತಿರುವ ಭಾರತದ ಸಾಯಿ ಸುದರ್ಶನ್ ಶೂನ್ಯಕ್ಕೆ ವಾಪಸಾಗಿದ್ದಾರೆ. ಭಾರೀ ಭರವಸೆ ಮೂಡಿಸಿರುವ ಯುವ ಆಟಗಾರ ಪಂದ್ಯದ ಮೊದಲ ದಿನವಾದ ಶುಕ್ರವಾರ ಭಾರತದ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿ, ಬೆನ್ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್‌ಕೀಪರ್ ಜೇಮೀ ಸ್ಮಿತ್‌ಗೆ ಕ್ಯಾಚ್ ನೀಡಿದರು.
23 ವರ್ಷದ ಎಡಗೈ ಬ್ಯಾಟರ್‌ಗೆ ಟಾಸ್ ಮುನ್ನ, ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಟೆಸ್ಟ್ ಕ್ಯಾಪ್ ಸಂಖ್ಯೆ 317ನ್ನು ನೀಡಿದರು. ಆರಂಭಿಕ ಕೆ.ಎಲ್. ರಾಹುಲ್ (42) ನಿರ್ಗಮನದ ಬಳಿಕ, ಅವರು ಮೂರನೇ ಕ್ರಮಾಂಕದಲ್ಲಿ ಆಡಲಿಳಿದರು. ಅವರು ತಾನೆದುರಿಸಿದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಮನವಿಯಿಂದ ಸ್ವಲ್ಪದರಲ್ಲೇ ಪಾರಾದರು. ಕ್ರೀಸ್‌ನಲ್ಲಿ ಇದ್ದ ಅಲ್ಪ ಅವಧಿಯುದ್ದಕ್ಕೂ ಅವರು ಆತ್ಮವಿಶ್ವಾಸದ ಕೊರತೆಯಿಂದ ಬಳಲಿದರು.
ಮುಂದಿನ ಓವರ್‌ನಲ್ಲಿ ಸ್ಟೋಕ್ಸ್, ಸುದರ್ಶನ್‌ರನ್ನು ಸಂಕಷ್ಟಕ್ಕೆ ಒಳಪಡಿಸಿದರು. ಅಂತಿಮವಾಗಿ ಅವರ ಎಸೆತದಲ್ಲಿ ವಿಕೆಟ್ ಹಿಂದುಗಡೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅವರು ಜೂನ್ 20ರಂದು ಟೆಸ್ಟ್ ಪಂದ್ಯಕ್ಕೆ ಪ್ರವೇಶ ಪಡೆದಿರುವುದು ಗಮನಾರ್ಹವಾಗಿದೆ. ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗುಲಿ 1996ರಲ್ಲಿ ಹಾಗೂ ವಿರಾಟ್ ಕೊಹ್ಲಿ 2011ರಲ್ಲಿ ಇದೇ ದಿನದಂದು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.
ಐಪಿಎಲ್ 2025ರ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ತಮಿಳುನಾಡು ಬ್ಯಾಟರ್ ಸುದರ್ಶನ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು.
►ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಭಾರತದ ಇತ್ತೀಚಿನ 10 ಆಟಗಾರರು
ಸಾಯಿರಾಜ್ ಬಹುತುಳೆ (2001), ಅಜಯ್ ರಾತ್ರಾ (2002), ಪಾರ್ಥಿವ್ ಪಟೇಲ್ (2002), ವೃದ್ಧಿಮಾನ್ ಸಾಹ (2010), ಪ್ರವೀಣ್ ಕುಮಾರ್ (2011), ಆರ್. ಅಶ್ವಿನ್ (2011), ಉಮೇಶ್ ಯಾದವ್ (2011), ಜಸ್‌ಪ್ರಿತ್ ಬುಮ್ರಾ (2018), ಹನುಮ ವಿಹಾರಿ (2018), ಸಾಯಿ ಸುದರ್ಶನ್ (2025).







