ವಿಜಯ ಹಝಾರೆ ಟ್ರೋಫಿ | ಬಿಹಾರದ ವಿಶ್ವದಾಖಲೆಯ ಮೊತ್ತ; ಅತ್ಯಂತ ವೇಗದ ಶತಕ ಬಾರಿಸಿದ ಸಾಕಿಬುಲ್ ಗನಿ

ಸಾಕಿಬುಲ್ ಗನಿ | Photo Credit : NDTV
ರಾಂಚಿ, ಡಿ. 24: ಬಿಹಾರವು ವಿಶ್ವದಾಖಲೆಯ ಲಿಸ್ಟ್ ಎ ಸ್ಕೋರ್ ದಾಖಲಿಸಿದೆ ಹಾಗೂ ತಂಡದ ನಾಯಕ ಸಾಕಿಬುಲ್ ಗನಿ ಅತ್ಯಂತ ವೇಗದ ಲಿಸ್ಟ್ ಎ ಶತಕ ಬಾರಿಸಿ ಭಾರತೀಯ ದಾಖಲೆ ನಿರ್ಮಿಸಿದ್ದಾರೆ. ಬುಧವಾರ ನಡೆದ ಅರುಣಾಚಲಪ್ರದೇಶದ ವಿರುದ್ಧದ ವಿಜಯ ಹಝಾರೆ ಟ್ರೋಫಿ 50 ಓವರ್ ಗಳ ಪಂದ್ಯದಲ್ಲಿ ಈ ದಾಖಲೆಗಳು ನಿರ್ಮಾಣವಾಗಿವೆ.
ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ 50 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 574 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಇದರೊಂದಿಗೆ ಅದು ಹಿಂದಿನ ಲಿಸ್ಟ್ ಎ ದಾಖಲೆಯಾದ 2 ವಿಕೆಟ್ ಗಳ ನಷ್ಟಕ್ಕೆ 506 ರನ್ ಅನ್ನು ಹಿಂದಿಕ್ಕಿತು. ಈ ದಾಖಲೆಯನ್ನು ತಮಿಳುನಾಡು 2022ರಲ್ಲಿ ವಿಜಯ ಹಝಾರೆ ಟ್ರೋಫಿಯಲ್ಲಿ ಅದೇ ಅರುಣಾಚಲಪ್ರದೇಶದ ವಿರುದ್ಧ ನಿರ್ಮಿಸಿತ್ತು.
ಮೂರು ಶತಕಗಳ ಮೂಲಕ ಈ ದಾಖಲೆಯ ಮೊತ್ತವನ್ನು ಪೇರಿಸಲಾಯಿತು.
ಸಾಕಿಬುಲ್ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿದರು. ಅವರು 40 ಎಸೆತಗಳಲ್ಲಿ 128 ರನ್ ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್ ನಲ್ಲಿ 10 ಬೌಂಡರಿಗಳು ಮತ್ತು 12 ಸಿಕ್ಸರ್ ಗಳಿದ್ದವು.
ಇದು ಜಾಗತಿಕ ಮಟ್ಟದ ಲಿಸ್ಟ್ ಎ ಪಂದ್ಯಗಳಲ್ಲಿ ಮೂರನೇ ಅತಿವೇಗದ ಶತಕವೂ ಆಗಿದೆ. ಮೊದಲನೇ ಸ್ಥಾನದಲ್ಲಿ 29 ಎಸೆತಗಳಲ್ಲಿ ಶತಕ ಸಿಡಿಸಿರುವ ಆಸ್ಟ್ರೇಲಿಯದ ಜೇಕ್ ಫ್ರೇಸರ್-ಮೆಕ್ ಗರ್ಕ್ ಇದ್ದರೆ, ಎರಡನೇ ಸ್ಥಾನದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿರುವ ದಕ್ಷಿಣ ಆಫ್ರಿಕದ ಎಬಿ ಡಿ ವಿಲಿಯರ್ಸ್ ಇದ್ದಾರೆ.
ಈ ಪಂದ್ಯವು ಇನ್ನೊಂದು ದಾಖಲೆಗೂ ಸಾಕ್ಷಿಯಾಯಿತು. ಬಿಹಾರದ 14 ವರ್ಷದ ವೈಭವ್ ಸೂರ್ಯವಂಶಿ 190 ರನ್ ಗಳನ್ನು ಸಿಡಿಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು.
ಇನ್ನೋರ್ವ ಆಟಗಾರ ಆಯುಶ್ ಲೋಹರುಕ 116 ರನ್ ಗಳನ್ನು ಸಿಡಿಸಿದರು.
ಬಿಹಾರದ ವಿಶ್ವದಾಖಲೆಯ ಮೊತ್ತಕ್ಕೆ ಸೂರ್ಯವಂಶಿ ಭದ್ರ ಅಡಿಪಾಯ ಹಾಕಿದರು. ಅವರು 84 ಎಸೆತಗಳಲ್ಲಿ 190 ರನ್ ಗಳನ್ನು ಸಿಡಿಸಿದರು.
ಅವರು ತನ್ನ ಶತಕವನ್ನು ಕೇವಲ 36 ಎಸೆತಗಳಲ್ಲಿ ಬಾರಿಸಿದರು. ಇದು ಭಾರತೀಯನೊಬ್ಬನ ಎರಡನೇ ಅತಿ ವೇಗದ ಶತಕವಾಗಿದೆ.
ಅವರು ತನ್ನ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕದ ಎಬಿ ಡಿ ವಿಲಿಯರ್ಸ್ ದಾಖಲೆಯೊಂದನ್ನೂ ಮುರಿದರು. ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 150 ರನ್ ಗಳನ್ನು ಗಳಿಸುವ ಮೂಲಕ ಅವರು ಡಿ ವಿಲಿಯರ್ಸ್ರನ್ನು ಹಿಂದಿಕ್ಕಿದರು.
ನಾಯಕ ಗನಿ ತಂಡದ ಮೊತ್ತವು 500ರ ಗಡಿಯನ್ನು ದಾಟುವಂತೆ ನೋಡಿಕೊಂಡರು.
ಪೀಯುಶ್ ಸಿಂಗ್ 77 ರನ್ ಗಳನ್ನು ಗಳಿಸಿದರು.
ಈ ಪಂದ್ಯವನ್ನು ಬಿಹಾರವು 397 ರನ್ ಗಳ ಭರ್ಜರಿ ಅಂತರದಿಂದ ಗೆದ್ದಿದೆ.
ಗೆಲ್ಲಲು 50 ಓವರ್ ಗಳಲ್ಲಿ 575 ರನ್ ಗಳ ಬೃಹತ್ ಗುರಿಯನ್ನು ಪಡೆದ ಅರುಣಾಚಲಪ್ರದೇಶವು 42.1 ಓವರ್ ಗಳಲ್ಲಿ 177 ರನ್ ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
38 ಎಸೆತಗಳಲ್ಲಿ 32 ರನ್ ಗಳನ್ನು ಗಳಿಸಿದ ನಾಯಕ ಕಂಶ ಯಾಂಗ್ಫೊ ತಂಡದ ಗರಿಷ್ಠ ಗಳಿಕೆದಾರರಾದರು.
ವೈಭವ್ ಸೂರ್ಯವಂಶಿಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
►ಲಿಸ್ಟ್ ಎ ಕ್ರಿಕೆಟ್ನಲ್ಲಿ ಗರಿಷ್ಠ ತಂಡ ಮೊತ್ತಗಳು
1. ಬಿಹಾರ- 574-6 ಗಿs ಅರುಣಾಚಲಪ್ರದೇಶ (2025)
2. ತಮಿಳುನಾಡು- 506-2 ಗಿs ಅರುಣಾಚಲಪ್ರದೇಶ (2022)
3. ಇಂಗ್ಲೆಂಡ್- 498-4 ಗಿs ನೆದರ್ಲ್ಯಾಂಡ್ಸ್ (2022)
4. ಸರ್ರೆ- 496-4 ಗಿs ಗ್ಲೋಸಸ್ಟರ್ಶಯರ್ (2007)
5. ಇಂಗ್ಲೆಂಡ್- 481-6 ಗಿs ಆಸ್ಟ್ರೇಲಿಯ (2018)
►ಲಿಸ್ಟ್ ಎ ಕ್ರಿಕೆಟ್ನಲ್ಲಿ ಭಾರತೀಯರ ವೇಗದ ಶತಕಗಳು
ಹೆಸರು ಚೆಂಡು ಪಂದ್ಯ ದಿನಾಂಕ
ಸಾಕಿಬುಲ್ ಹಸನ್ 32 ಬಿಹಾರ- ಅರುಣಾಚಲಪ್ರದೇಶ ಡಿ. 24, 2025
ಇಶಾನ್ ಕಿಶನ್ 33 ಜಾರ್ಖಂಡ್-ಕರ್ನಾಟಕ ಡಿ. 24, 2025
ಅನ್ಮೋಲ್ಪ್ರೀತ್ ಸಿಂಗ್ 35 ಪಂಜಾಬ್-ಅರುಣಾಚಲ ಡಿ. 21, 2024
ವೈಭವ್ ಸೂರ್ಯವಂಶಿ 36 ಬಿಹಾರ-ಅರುಣಾಚಲ ಡಿ. 24, 2025
ಯೂಸುಫ್ ಪಠಾಣ್ 40 ಬರೋಡ-ಮಹಾರಾಷ್ಟ್ರ ಫೆಬ್ರವರಿ 16, 2010







