ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ-2024 | ಭಾರತದ ಹಾಕಿ ತಂಡ ಪ್ರಕಟ, ಸಲೀಮಾ ನಾಯಕಿ

ಸಲೀಮಾ ಟೆಟೆ | PC : X \ @TheKhelIndia
ಹೊಸದಿಲ್ಲಿ : ಮಹಿಳೆಯರ ಏಶ್ಯನ್ ಚಾಂಪಿಯನ್ಶಿಪ್ಗೆ ಹಾಕಿ ಇಂಡಿಯಾವು ಸೋಮವಾರ ಮಹಿಳೆಯರ ಹಾಕಿ ತಂಡವನ್ನು ಪ್ರಕಟಿಸಿದೆ. ಏಶ್ಯನ್ ಚಾಂಪಿಯನ್ಸ್ ಟ್ರೋಫಿಯು ಬಿಹಾರದ ರಾಜ್ಗಿರ್ನಲ್ಲಿ ನವೆಂಬರ್ 11ರಿಂದ 20ರ ತನಕ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ ತಂಡವನ್ನು ಸಲೀಮಾ ಟೆಟೆ ನಾಯಕಿಯಾಗಿ ಮುನ್ನಡೆಸಲಿದ್ದು, ನವನೀತ್ ಕೌರ್ ಉಪ ನಾಯಕಿಯಾಗಿರುತ್ತಾರೆ. 2023ರ ಆವೃತ್ತಿಯಲ್ಲಿ ಜಪಾನ್ ತಂಡವನ್ನು ಫೈನಲ್ ನಲ್ಲಿ 4-0 ಅಂತರದಿಂದ ಮಣಿಸಿದ್ದ ಭಾರತವು 2016ರ ನಂತರ ಎರಡನೇ ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.
ತಂಡದ ಆಯ್ಕೆ ಹಾಗೂ ಪಂದ್ಯಾವಳಿಗೆ ತಮ್ಮ ಸಿದ್ಧತೆಯ ಕುರಿತು ಮಾತನಾಡಿದ ಮಿಡ್ ಫೀಲ್ಡರ್ ಸಲೀಮಾ ಟೆಟೆ, ಹಾಲಿ ಚಾಂಪಿಯನ್ ತಂಡವನ್ನು ಮತ್ತೊಂದು ಪ್ರಮುಖ ಪಂದ್ಯಾವಳಿಯಲ್ಲಿ ನಾಯಕಿಯಾಗಿ ಮುನ್ನಡೆಸುತ್ತಿರುವುದು ನಂಬಲಾಗದ ವಿಚಾರವಾಗಿದೆ ಎಂದರು.
ನಾವು ಕಠಿಣ ತರಬೇತಿ ಪಡೆದಿದ್ದೇವೆ. ಅನುಭವಿ ಆಟಗಾರ್ತಿಯರು ಹಾಗೂ ಯುವ ಪ್ರತಿಭೆಗಳ ಮಿಶ್ರಣವಿರುವ ತಂಡವನ್ನು ಹೊಂದಿದ್ದೇವೆ. ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮ ಗುರಿ. ಕಳೆದ ವರ್ಷ ನಾವು ತೋರಿಸಿರುವ ಅದೇ ಉತ್ಸಾಹ ಹಾಗೂ ದೃಢಚಿತ್ತದೊಂದಿಗೆ ಆಡಲಿದ್ದೇವೆ ಎಂದು ಸಲೀಮಾ ಟೆಟೆ ಹೇಳಿದ್ದಾರೆ.
ಭಾರತದ ಹಾಕಿ ತಂಡವು ಆರಂಭಿಕ ಪಂದ್ಯದಲ್ಲಿ ಮಲೇಶ್ಯ ತಂಡವನ್ನು ಎದುರಿಸಲಿದೆ. ಆ ನಂತರ ನವೆಂಬರ್ 12ರಂದು ಕೊರಿಯಾ ತಂಡವನ್ನು ಎದುರಿಸಲಿದೆ. ಥಾಯ್ಲೆಂಡ್(ನ.14), ಚೀನಾ(ನ.16) ಹಾಗೂ ಜಪಾನ್(ನ.17)ತಂಡಗಳೊಂದಿಗೆ ಸೆಣಸಾಡಲಿದೆ.
ಡಿಫೆನ್ಸ್ ವಿಭಾಗದಲ್ಲಿ ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಸುಶೀಲಾ ಚಾನು ಹಾಗೂ ವೈಷ್ಣವಿ ವಿಠಲ್ ಫಾಲ್ಕೆ ಅವರಿದ್ದಾರೆ.
ಮಿಡ್ ಫೀಲ್ಡ್ನಲ್ಲಿ ನಾಯಕಿ ಸಲೀಮಾ ಟೆಟೆಗೆ ನೇಹಾ, ಶರ್ಮಿಳಾ ದೇವಿ, ಮನಿಶಾ ಚೌಹಾಣ್, ಸುನೇತಾ ಟೊಪ್ಪೊ ಹಾಗೂ ಲಾಲ್ರೆಮ್ಸಿಯಾಮಿ ಸಾಥ್ ನೀಡಲಿದ್ದಾರೆ. ಫಾರ್ವರ್ಡ್ ಸರದಿಯಲ್ಲಿ ನವನೀತ್ ಕೌರ್, ಸಂಗೀತಾ ಕುಮಾರಿ, ದೀಪಿಕಾ, ಪ್ರೀತಿ ದುಬೆ ಹಾಗೂ ಬ್ಯೂಟಿ ಡಂಗ್ಡಂಗ್ ಅವರಿದ್ದಾರೆ. ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ನಂತರ ಸುಶೀಲಾ ಹಾಗೂ ಬ್ಯೂಟಿ ಡಂಗ್ಡಂಗ್ ತಂಡಕ್ಕೆ ವಾಪಸಾಗುತ್ತಿದ್ದಾರೆ.
ನಮ್ಮ ತಯಾರಿ ಹಾಗೂ ತಂಡದೊಳಗೆ ನಮ್ಮ ಸಮನ್ವಯತೆ ಬಗ್ಗೆ ವಿಶ್ವಾಸವಿದೆ. ನಮ್ಮ ತವರು ಪ್ರೇಕ್ಷಕರು ಎದುರು ಆಡುವುದು ದೊಡ್ಡ ಉತ್ತೇಜನಕಾರಿ ಅಂಶ. ಏಶ್ಯದ ಅತ್ಯುತ್ತಮ ತಂಡಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲು ನಾವು ಸಿದ್ಧ ಎಂದು ಉಪ ನಾಯಕಿ ನವನೀತ್ ಕೌರ್ ಹೇಳಿದ್ದಾರೆ.
ಚೀನಾ, ಭಾರತ, ಜಪಾನ್, ಕೊರಿಯಾ, ಮಲೇಶ್ಯ ಹಾಗೂ ಥಾಯ್ಲೆಂಡ್ ಸಹಿತ ಒಟ್ಟು ಆರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
► ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ :
ಗೋಲ್ಕೀಪರ್ಗಳು : ಸವಿತಾ, ಬಿಚು ದೇವಿ
ಡಿಫೆಂಡರ್ಗಳು : ಉದಿತಾ, ಜ್ಯೋತಿ, ವೈಷ್ಣವಿ ವಿಠಲ್ ಫಾಲ್ಕೆ, ಸುಶೀಲಾ ಚಾನು, ಇಶಿಕಾ ಚೌಧರಿ.
ಮಿಡ್ ಫೀಲ್ಡರ್ಗಳು: ನೇಹಾ, ಸಲೀಮಾ ಟೆಟೆ(ನಾಯಕಿ), ಶರ್ಮಿಳಾ ದೇವಿ, ಮನಿಶಾ ಚೌಹಾಣ್, ಸುನೆಲಿತಾ ಟೊಪ್ಪೊ, ಲಾಲ್ ರೆಮ್ಸಿಯಾಮಿ.
ಫಾರ್ವರ್ಡ್ಗಳು : ನವನೀತ್ ಕೌರ್(ಉಪ ನಾಯಕಿ), ಪ್ರೀತಿ ದುಬೆ, ಸಂಗೀತಾ ಕುಮಾರಿ, ದೀಪಿಕಾ, ಬ್ಯೂಟಿ ಡಂಗ್ಡಂಗ್.







