2024ರ ಐಪಿಎಲ್ ಹರಾಜಿನಲ್ಲಿ 8.4 ಕೋಟಿ ರೂ ಪಡೆದ ಸಮೀರ್ ರಿಝ್ವಿ!
ಚೆನ್ನೈ ಪಾಲಾದ ಉತ್ತರ ಪ್ರದೇಶದ ಉದಯೋನ್ಮುಖ ಬ್ಯಾಟರ್

ಸಮೀರ್ ರಿಝ್ವಿ, Photo: Sameer Rizvi/Instagram
ದುಬೈ : ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ 2024 ಹರಾಜಿನಲ್ಲಿ ಉತ್ತರ ಪ್ರದೇಶದ ಬ್ಯಾಟರ್ ಸಮೀರ್ ರಿಝ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 8.4 ಕೋಟಿ ರೂ.ಗೆ ಖರೀದಿಸಿತು. ಮೂಲ ಬೆಲೆ ಕೇವಲ 20 ಲಕ್ಷ ರೂ. ಇದ್ದ ರಿಝ್ವಿ ಅದರ 400 ಪಟ್ಟು ಹೆಚ್ಚು ಬೆಲೆಗೆ ಹರಾಜಾದರು!
ರಿಝ್ವಿ ಅವರನ್ನು ಖರೀದಿಸಲು ಮೊದಲು ಚೆನ್ನೈ ಮತ್ತು ಗುಜರಾತ್ ಟೈಟಾನ್ಸ್ ಬಿಡ್ಡಿಂಗ್ ನಲ್ಲಿ ತೊಡಗಿದ್ದವು. ಆಸಕ್ತಿ ತಾಳಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ಪ್ರವೇಶಿಸಿತು. ಡೆಲ್ಲಿ ಯ ಪ್ರವೇಶದ ನಂತರ ಗುಜರಾತ್ 7.6 ಕೋಟಿಯ ವರೆಗೆ ಬಿಡ್ಡಿಂಗ್ ಕೊಂಡೊಯ್ಯಿತು. ಕೊನೆಯ ರಿಝ್ವಿ ಅವರನ್ನು 8.4 ಕೋಟಿ ರೂ ಗೆ ಖರೀದಿಸಿದ ಚೆನ್ನೈ ಗೆಲುವಿನ ನಗೆ ಬೀರಿತು.
ಇತ್ತೀಚಿನ ಯುಪಿ ಟಿ 20 ಲೀಗ್ನ ನಂತರ ರಿಝ್ವಿ ಗಮನ ಸೆಳೆದರು. ಅಲ್ಲಿ ಕಾನ್ಪುರ ಸೂಪರ್ಸ್ಟಾರ್ಸ್ಗಾಗಿ ಎರಡು ಶತಕಗಳು ಸೇರಿದಂತೆ ಒಂಭತ್ತು ಇನ್ನಿಂಗ್ಸ್ಗಳಲ್ಲಿ 455 ರನ್ ಗಳಿಸಿದ್ದರು.
20 ವರ್ಷ ವಯಸ್ಸಿನ ಸಮೀರ್ ರಿಝ್ವಿ ಈ ಋತುವಿನ ಆರಂಭದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ ಆಕರ್ಷಕ ಆಟ ಪ್ರದರ್ಶಿಸಿ, ಗಮನ ಸೆಳೆದಿದ್ದರು.
ರಿಝ್ವಿ ಇದುವರೆಗೆ 11 ಟಿ20 ಪಂದ್ಯಗಳನ್ನು ಆಡಿ 49.16ರ ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ.
ಬಲಗೈ ಬ್ಯಾಟರ್ ಆಗಿರುವ ಸಮೀರ್ ರಿಝ್ವಿ, ಪುರುಷರ 23 ವಯಸ್ಸಿನವರೊಳಗಿನ ರಾಜ್ಯ ʼಎ ʼ ತಂಡದ ಪಂದ್ಯಾವಳಿಯಲ್ಲಿ ಉತ್ತಮ ಹೊಡೆತಗಳ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಎರಡು ಅರ್ಧಶತಕಗಳು ಮತ್ತು ಎರಡು ಶತಕಗಳನ್ನು ಗಳಿಸಿದ್ದಾರೆ. ಅಂತಿಮ ಪಂದ್ಯದಲ್ಲಿ 50 ಎಸೆತಗಳಲ್ಲಿ 84 ರನ್ ಗಳಿಸಿ ಉತ್ತರ ಪ್ರದೇಶವನ್ನು ಗೆಲವಿನ ದಡಕ್ಕೆ ಕೊಂಡೊಯ್ಯಲು ಸಹಾಯ ಮಾಡಿದರು. ರಿಝ್ವಿ ಈ ಟೂರ್ನಿಯಲ್ಲಿ 37 ಸಿಕ್ಸರ್ ಗಳೊಂದಿಗೆ ಅತೀ ಹೆಚ್ಚು ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.







