ರಾಜಸ್ಥಾನ ರಾಯಲ್ಸ್ ನ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ ಸ್ಯಾಮ್ಸನ್

ಸಂಜು ಸ್ಯಾಮ್ಸನ್ | PC : X
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್-2025ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 50 ರನ್ ಅಂತರದಿಂದ ಜಯ ಸಾಧಿಸಿದ ನಂತರ ಫ್ರಾಂಚೈಸಿಯ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದರು.
ಮಲ್ಲನ್ಪುರದ ಮಹಾರಾಜ್ ಯಾದವೀಂದ್ರ ಸಿಂಗ್ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸ್ಯಾಮ್ಸನ್ ರಾಜಸ್ಥಾನ ತಂಡದ ನಾಯಕನಾಗಿ 32ನೇ ಪಂದ್ಯದಲ್ಲಿ ಜಯಶಾಲಿಯಾದರು. ಈ ಮೂಲಕ ಲೆಜೆಂಡರಿ ಶೇನ್ ವಾರ್ನ್(31 ಗೆಲುವು)ಅವರ ದಾಖಲೆಯನ್ನು ಮುರಿದರು.
2008ರ ಮೊದಲ ಆವೃತ್ತಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಪ್ರಶಸ್ತಿ ಗೆಲ್ಲಲು ನಾಯಕತ್ವವಹಿಸಿದ್ದ ವಾರ್ನ್ 55 ಪಂದ್ಯಗಳ ಪೈಕಿ 31ರಲ್ಲಿ ಜಯಶಾಲಿಯಾಗಿದ್ದರು. ಸ್ಯಾಮ್ಸನ್ ಇದೀಗ 62 ಪಂದ್ಯಗಳಲ್ಲಿ 32ರಲ್ಲಿ ಜಯ ಸಾಧಿಸಿದ್ದು ರಾಯಲ್ಸ್ ನ ಅತ್ಯಂತ ಯಶಸ್ವಿ ನಾಯಕನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಯಶಸ್ವಿ ಜೈಸ್ವಾಲ್(67 ರನ್, 45 ಎಸೆತ)ಬ್ಯಾಟಿಂಗ್ನಲ್ಲಿ ಮಿಂಚಿದ್ದಲ್ಲದೆ, ನಾಯಕ ಸ್ಯಾಮ್ಸನ್(38 ರನ್)ಅವರೊಂದಿಗೆ ಮೊದಲ ವಿಕೆಟ್ ನಲ್ಲಿ 89 ರನ್ ಜೊತೆಯಾಟ ನಡೆಸಿ ರಾಜಸ್ಥಾನ ತಂಡವು 4 ವಿಕೆಟ್ಗಳ ನಷ್ಟಕ್ಕೆ 205 ರನ್ ಗಳಿಸಲು ನೆರವಾದರು. ಗೆಲ್ಲಲು 206 ರನ್ ಗುರಿ ಪಡೆದಿದ್ದ ಪಂಜಾಬ್ ತಂಡಕ್ಕೆ ವೇಗದ ಬೌಲರ್ ಜೋಫ್ರಾ ಆರ್ಚರ್(3-25)ಸಿಂಹಸ್ವಪ್ನರಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನೇಹಾಲ್ ವದೇರ(62)ಏಕಾಂಗಿ ಹೋರಾಟದ ಹೊರತಾಗಿಯೂ ಪಂಜಾಬ್ ತಂಡ 9 ವಿಕೆಟ್ಗಳ ನಷ್ಟಕ್ಕೆ 155 ರನ್ ಗಳಿಸಿತು.
ಸ್ಯಾಮ್ಸನ್ ನಾಯಕತ್ವದಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ ಮೊದಲ ಪಂದ್ಯವನ್ನು ಆಡಿದ್ದು, ಯಶಸ್ವಿ ಅಭಿಯಾನಕ್ಕೆ ಅಡಿಗಲ್ಲು ಹಾಕಿದ್ದಾರೆ.
ರಾಜಸ್ಥಾನ ರಾಯಲ್ಸ್ ನಾಯಕನಾಗಿ ಗರಿಷ್ಠ ಗೆಲುವು
32-ಸಂಜು ಸ್ಯಾಮ್ಸನ್(62 ಪಂದ್ಯಗಳು)
31-ಶೇನ್ ವಾರ್ನ್(55 ಪಂದ್ಯಗಳು)
18-ರಾಹುಲ್ ದ್ರಾವಿಡ್(34 ಪಂದ್ಯಗಳು)
15-ಸ್ಟೀವನ್ ಸ್ಮಿತ್(27 ಪಂದ್ಯಗಳು)
9-ಅಜಿಂಕ್ಯ ರಹಾನೆ(24 ಪಂದ್ಯಗಳು)







