ನನ್ನ ವಿಶ್ವಕಪ್ ಅರ್ಧಶತಕಕ್ಕಿಂತ ಜೆಮಿಮಾ ಶತಕ ಶ್ರೇಷ್ಠ: ಸಂದೀಪ್ ಪಾಟೀಲ್

ಜೆಮಿಮಾ ರೊಡ್ರಿಗಸ್ | Photo Credit : PTI
ಮುಂಬೈ, ಅ.31: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಗುರುವಾರ ರಾತ್ರಿ ನಡೆದ ಮಹಿಳೆಯರ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ನಲ್ಲಿ 7 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 5 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದ್ದು, 1983ರ ಪುರುಷರ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಸಂದೀಪ್ ಪಾಟೀಲ್ ಮಹಿಳಾ ತಂಡದ ಅದರಲ್ಲೂ ಗೆಲುವಿನ ರೂವಾರಿಯಾದ ಜೆಮಿಮಾ ರೊಡ್ರಿಗಸ್ ಸಾಧನೆಯನ್ನು ಕೊಂಡಾಡಿದ್ದಾರೆ.
ಭಾರತೀಯ ಕ್ರಿಕೆಟಿನ ಪುರುಷರ ಹಾಗೂ ಮಹಿಳೆಯರ ಪಂದ್ಯದಲ್ಲಿ ಇದೊಂದು ಶ್ರೇಷ್ಠ ಗೆಲುವಾಗಿದೆ ಎಂದು ಬಲಿಷ್ಠ ಆಸ್ಟ್ರೇಲಿಯವನ್ನು ಮಣಿಸಿದ ಭಾರತ ತಂಡದ ಸಾಧನೆಯನ್ನು ಕ್ರಿಕೆಟ್ ಲೆಜೆಂಡ್ ಸುನೀಲ್ ಗವಾಸ್ಕರ್ ಶ್ಲಾಘಿಸಿದರು.
‘‘ಆಸ್ಟ್ರೇಲಿಯ ತಂಡದ ವಿರುದ್ಧ ಭಾರತೀಯ ಮಹಿಳಾ ತಂಡದ ಸೆಮಿ ಫೈನಲ್ ಪಂದ್ಯದ ಗೆಲುವು 1983ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಮ್ಮ ತಂಡದ ಗೆಲುವನ್ನು ನೆನಪಿಸಿತು. ಆಸ್ಟ್ರೇಲಿಯವನ್ನು ಸೋಲಿಸುವುದು ಯಾವಾಗಲೂ ವಿಶೇಷವಾದುದು’’ ಎಂದು 1983ರ ವಿಶ್ವಕಪ್ ಹೀರೋಗಳ ಪೈಕಿ ಒಬ್ಬರಾಗಿರುವ ಸಂದೀಪ್ ಪಾಟೀಲ್ ಹೇಳಿದ್ದಾರೆ.
‘‘ನಾನು ಭಾರತೀಯ ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಗೆ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದೇನೆ’’ ಎಂದಿರುವ ಪಾಟೀಲ್, ‘‘ನಾನು 1983ರ ವಿಶ್ವಕಪ್ ಸೆಮಿ ಫೈನಲ್ನಲ್ಲಿ 32 ಎಸೆತಗಳಲ್ಲಿ ಔಟಾಗದೆ 51 ರನ್ ಗಳಿಸಿ ಭಾರತವು ಗೆಲುವು ದಾಖಲಿಸಲು ನೆರವಾಗಿದ್ದೆ. ಅದೇ ರೀತಿ ಗುರುವಾರ ರಾತ್ರಿ ಜೆಮಿಮಾ ರೊಡ್ರಿಗಸ್ ಅವರು 134 ಎಸೆತಗಳಲ್ಲಿ ಔಟಾಗದೆ 127 ರನ್ ಗಳಿಸಿ ಭಾರತವು ದಾಖಲೆಯ 339 ರನ್ ಚೇಸ್ ಮಾಡಲು ನೆರವಾಗಿದ್ದರು. ನನ್ನ ಬಿರುಸಿನ ಅರ್ಧಶತಕಕ್ಕಿಂತ ಜೆಮಿಮಾ ಶತಕ ಶ್ರೇಷ್ಠವಾದುದು. ಅವರ ಹೊಡೆತಗಳ ಆಯ್ಕೆ, ಒತ್ತಡದಲ್ಲೂ ಶಾಂತವಾಗಿದ್ದು, ಹಳೆಯ ಮುಂಬೈ ಆಟಗಾರರ ನಡವಳಿಕೆಯನ್ನು ನೆನಪಿಸಿತು. ಇದೊಂದು ದೊಡ್ಡ ಗುರಿಯಾಗಿತ್ತು. ಆದರೆ ಜೆಮಿಮಾ ಕೊನೆಯ ತನಕ ಕ್ರೀಸ್ ನಲ್ಲಿದ್ದರು’’ ಎಂದರು.







