T20 ವಿಶ್ವಕಪ್ | ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಕೊಟ್ಟ ಸಂಜು ಸ್ಯಾಮ್ ಸನ್; ವಿಂಡೀಸ್ ವಿರುದ್ಧ 5 ವಿಕೆಟ್ ಗಳ ಜಯ

ಸಂಜು ಸ್ಯಾಮ್ ಸನ್ | Photo Credit ; X
ಕೋಲ್ಕತಾ: ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಸೊಗಸಾದ ಬ್ಯಾಟಿಂಗ್(ಔಟಾಗದೆ 97, 50 ಎಸೆತ, 12 ಬೌಂಡರಿ,4 ಸಿಕ್ಸರ್) ನೆರವಿನಿಂದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲಲೇಬೇಕಾದ ಸೂಪರ್-8 ಪಂದ್ಯದಲ್ಲಿ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ಮಣಿಸಿದ ಹಾಲಿ ಚಾಂಪಿಯನ್ ಭಾರತ ತಂಡ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಮಾ.5ರಂದು ಮುಂಬೈನಲ್ಲಿ ನಡೆಯಲಿರುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.
ರವಿವಾರ ಈಡನ್ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವೆಸ್ಟ್ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 195 ರನ್ ಗಳಿಸಿತು. ಗೆಲ್ಲಲು 196 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ 19.2 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 199 ರನ್ ಗಳಿಸಿತು.
ತಿಲಕ್ ವರ್ಮಾ(27 ರನ್,15 ಎಸೆತ), ಸೂರ್ಯಕುಮಾರ್(18 ರನ್)ಹಾಗೂ ಹಾರ್ದಿಕ್ ಪಾಂಡ್ಯ(17 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ವಿಂಡೀಸ್ ಪರವಾಗಿ ಜೇಸನ್ ಹೋಲ್ಡರ್(2-38)ಹಾಗೂ ಶಮರ್ ಜೋಸೆಫ್(2-42) ತಲಾ ಎರಡು ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು ವಿಂಡೀಸ್ ತಂಡದ ಇನಿಂಗ್ಸ್ ಆರಂಭಿಸಿದ ನಾಯಕ ಶಾಯ್ ಹೋಪ್(32 ರನ್, 33 ಎಸೆತ)ಹಾಗೂ ರೋಸ್ಟನ್ ಚೇಸ್(40 ರನ್, 25 ಎಸೆತ)8.5 ಓವರ್ಗಳಲ್ಲಿ 68 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಹೋಪ್ ಅವರು ವರುಣ್ ಚಕ್ರವರ್ತಿಗೆ ಕ್ಲೀನ್ಬೌಲ್ಡಾದ ನಂತರ ಹೆಟ್ಮೆಯರ್(27 ರನ್, 12 ಎಸೆತ)ಹಾಗೂ ಚೇಸ್ಎರಡನೇ ವಿಕೆಟ್ಗೆ 34 ರನ್ ಸೇರಿಸಿದರು. ಹೆಟ್ಮೆಯರ್ ಹಾಗೂ ಚೇಸ್ ಬುಮ್ರಾ ಬೌಲಿಂಗ್ನಲ್ಲಿ ಬೆನ್ನುಬೆನ್ನಿಗೆ ಔಟಾದರು.
ರುದರ್ಫೋರ್ಡ್(14ರ ನ್,9 ಎಸೆತ)ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಆಗ ಜೊತೆಯಾದ ರೋವ್ಮನ್ ಪೊವೆಲ್(ಔಟಾಗದೆ 34 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ಜೇಸನ್ ಹೋಲ್ಡರ್(ಔಟಾಗದೆ 37, 22 ಎಸೆತ, 2 ಬೌಂಡರಿ, 3 ಸಿಕ್ಸರ್)ಐದನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 76 ರನ್ ಸೇರಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು.
ಪೊವೆಲ್ ಟಿ-20 ಕ್ರಿಕೆಟ್ನಲ್ಲಿ 150 ಸಿಕ್ಸರ್ಗಳನ್ನು ಸಿಡಿಸಿದ ವೆಸ್ಟ್ಇಂಡೀಸ್ನ ಮೊದಲ ಆಟಗಾರನಾಗಿದ್ದಾರೆ. ಇದರೊಂದಿಗೆ ತಮ್ಮದೇ ದೇಶದ ನಿಕೊಲಸ್ ಪೂರನ್ ದಾಖಲೆ(149 ಸಿಕ್ಸರ್)ಯನ್ನು ಮುರಿದರು. ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ಗಳನ್ನು ಗಳಿಸಿರುವ ಐದನೇ ಆಟಗಾರನಾಗಿದ್ದಾರೆ.
ವಿಂಡೀಸ್ ತಂಡ ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಮಧ್ಯಮ ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಕೊನೆಯ ಓವರ್ಗಳಲ್ಲಿ 46 ರನ್ ಕಲೆ ಹಾಕಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ(2-36)ಯಶಸ್ವಿ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ(1-40)ಹಾಗೂ ವರುಣ್ ಚಕ್ರವರ್ತಿ(1-40)ತಲಾ ಒಂದು ವಿಕೆಟ್ ಪಡೆದರು.
ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಡುವ 11ರ ಬಳಗವನ್ನೇ ಭಾರತ ತಂಡ ಕಣಕ್ಕಿಳಿಸಿದೆ. ಸಂಜಯ್ ಆರಂಭಿಕ ಆಟಗಾರನಾಗಿ ಮುಂದುವರಿದಿದ್ದು, ರಿಂಕು ಸಿಂಗ್ ಅವಕಾಶ ವಂಚಿತರಾಗಿದ್ದಾರೆ.
ವೆಸ್ಟ್ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ತಂಡದ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆಯನ್ನು ಮಾಡಿದೆ. ಆರಂಭಿಕ ಬ್ರೆಂಡನ್ ಕಿಂಗ್ರನ್ನು ಕೈಬಿಟ್ಟಿರುವ ವಿಂಡೀಸ್ ಎಡಗೈ ಆಲ್ರೌಂಡರ್ ಅಕೀಲ್ ಹುಸೇನ್ಗೆ ಮಣೆ ಹಾಕಿದೆ.






