"ದಿ ರಿಯಲ್ ಕೇರಳ ಸ್ಟೋರಿ": ಹಿಂದೂ–ಮುಸ್ಲಿಂ–ಕ್ರಿಶ್ಚಿಯನ್ ಪ್ರಾರ್ಥನೆಗಳ ಸಂಕೇತವಾಗಿ ಮೂಡಿದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್

ಸಂಜು ಸ್ಯಾಮ್ಸನ್ | Photo Credit : ICC
ಹೊಸದಿಲ್ಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಗಳ ಜಯ ಸಾಧಿಸಿದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಅಜೇಯ 97 ರನ್ ಗಳೊಂದಿಗೆ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದ ಸಂಜು ಸ್ಯಾಮ್ಸನ್ ಮೈದಾನದಲ್ಲೇ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸಿದ ದೃಶ್ಯ ಜನರ ಗಮನ ಸೆಳೆದಿದೆ.
ಹೆಲ್ಮೆಟ್ ತೆಗೆದು ಆಕಾಶದತ್ತ ನೋಡಿದ ಸ್ಯಾಮ್ಸನ್ ಕೈಗಳನ್ನು ಎತ್ತಿ ಪ್ರಾರ್ಥಿಸಿ, ಅಗಲವಾಗಿ ಹರಡಿದ ತೋಳುಗಳಿಗೆ ಶಿಲುಬೆಯ ಚಿಹ್ನೆಯೊಂದಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಬಳಿಕ ಕೈ ಮುಗಿದರು. ಅಭಿಮಾನಿಗಳ ಅಭಿಪ್ರಾಯದಲ್ಲಿ, ಅವರ ಈ ಭಂಗಿಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಸಂಕೇತಗಳು ಒಂದೇ ವೇಳೆ ಕಾಣಿಸಿಕೊಂಡವು. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿ, ಧಾರ್ಮಿಕ ಸಾಮರಸ್ಯದ ಸಂಕೇತವೆಂದು ಹಲವರು ಕೊಂಡಾಡಿದ್ದಾರೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯ ಎರಡೂ ತಂಡಗಳಿಗೆ ಕ್ವಾರ್ಟರ್ ಫೈನಲ್ ಸಮಾನವಾಗಿತ್ತು. ಸ್ಯಾಮ್ಸನ್ ಅವರು ಫಿನಿಶಿಂಗ್ ನಂತರ ಅವರು ಮೈದಾನಕ್ಕೆ ಮರಳುತ್ತಿದ್ದಾಗ ನಾಯಕ ಸೂರ್ಯಕುಮಾರ್ ಯಾದವ್ ಗೌರವ ಸೂಚಿಸಿದರು. ಕ್ಯಾಪ್ ಅನ್ನು ತಿರುಗಿಸಿ ಅಭಿನಂದಿಸಿದ ದೃಶ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕೇರಳದ ತಿರುವನಂತಪುರಂ ಜಿಲ್ಲೆಯ ವಿಳಿಂಜಮ್ ಸಮೀಪದ ಕರಾವಳಿ ಹಳ್ಳಿಯ ಮಲಯಾಳಿ ಕ್ರಿಶ್ಚಿಯನ್ ಕುಟುಂಬದ ಹಿನ್ನಲೆಯಿಂದ ಬಂದ ಸಂಜು ಸ್ಯಾಮ್ಸನ್, ಒತ್ತಡದ ಪರಿಸ್ಥಿತಿಯಲ್ಲೂ ಸ್ಥೈರ್ಯ ಕಾಪಾಡಿಕೊಂಡು ತಂಡವನ್ನು ಗುರಿಯತ್ತ ಮುನ್ನಡೆಸಿದರು. 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಚೇಸಿಂಗ್ ವೇಳೆ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ಸ್ಕೋರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದನ್ನು “ದಿ ರಿಯಲ್ ಕೇರಳ ಸ್ಟೋರಿ” ಎಂದು ವರ್ಣಿಸಿದ್ದಾರೆ. “ಅವರು ನೆಲದ ಮೇಲೆ ಪ್ರಾರ್ಥಿಸಿದರು… ಅಲ್ಲಾ, ಯೇಸು, ಶ್ರೀರಾಮ ಎಲ್ಲ ದೇವರುಗಳಿಗೆ ಧನ್ಯವಾದಗಳು, ಯಾರಿಗೂ ನೋವಾಗದ ಆಚರಣೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಇದು ಕ್ರೀಡೆಗಿಂತ ದೊಡ್ಡ ಸಂದೇಶ. ಧರ್ಮಗಳ ನಡುವೆ ಸಾಮರಸ್ಯದ ಚಿತ್ರಣ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ‘ದಿ ಕೇರಳ ಸ್ಟೋರಿ 2’ ಚಿತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನೂ ಕೆಲವರು ಉಲ್ಲೇಖಿಸಿದರು. ನಿರ್ದಿಷ್ಟ ಸಮುದಾಯದ ವಿರುದ್ಧ ನಕಾರಾತ್ಮಕ ನಿರೂಪಣೆ ಮಾಡುತ್ತಿದೆ ಎಂಬ ಆರೋಪಗಳ ನಡುವೆ ಬಿಡುಗಡೆಯಾದ ಈ ಚಿತ್ರ ಮೂರು ದಿನಗಳಲ್ಲಿ ₹10.15 ಕೋಟಿ ಸಂಗ್ರಹಿಸಿರುವುದಾಗಿ ವರದಿಯಾಗಿದೆ.
ಟೂರ್ನಮೆಂಟ್ ಆರಂಭದಲ್ಲಿ ಸ್ಯಾಮ್ಸನ್ ಮೊದಲ ಆಯ್ಕೆಯ ಆರಂಭಿಕ ಆಟಗಾರರಾಗಿರಲಿಲ್ಲ. ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಮೊದಲ ಪಂದ್ಯದಲ್ಲಿ 8 ಎಸೆತಗಳಲ್ಲಿ 22 ರನ್ ಗಳಿಸಿದ್ದ ಅವರು, ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಿದರು.
ಸ್ಟಂಪ್ ನ ಇನ್ನೊಂದು ತುದಿಯಲ್ಲಿ ವಿಕೆಟ್ ಗಳು ಬೀಳುತ್ತಿದ್ದರೂ, ಅಗತ್ಯ ರನ್ ರೇಟ್ ಏರಿಕೆಯಾಗುತ್ತಿದ್ದಂತೆ ಸಮಯೋಚಿತ ಬೌಂಡರಿಗಳೊಂದಿಗೆ ತಂಡವನ್ನು ಮುನ್ನಡೆಸಿದರು.
ಹಿಂದಿನ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 187 ರನ್ ಬೆನ್ನಟ್ಟುವಲ್ಲಿ ಭಾರತ ವಿಫಲವಾದ ಬಳಿಕ, ಸಂಯೋಜಿತ ಚೇಸ್ ನಿರ್ಮಾಣದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಯಾಮ್ಸನ್ ಅವರ ಇನ್ನಿಂಗ್ಸ್ ಗಮನಾರ್ಹವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಸ್ಯಾಮ್ಸನ್, “ದೇಶಕ್ಕಾಗಿ ಆಡಲು ಕನಸು ಕಂಡ ದಿನದಿಂದ ಕಾಯುತ್ತಿದ್ದ ಕ್ಷಣ ಇದು. ಸರ್ವಶಕ್ತನಿಗೆ ಧನ್ಯವಾದಗಳು,” ಎಂದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ನೋಡುವುದರಿಂದ ತಮ್ಮ ಆಟವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.






