IPL ನಲ್ಲಿ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ | ವಿರಾಟ್ ಕೊಹ್ಲಿ, ರಾಹುಲ್ ಪಟ್ಟಿಗೆ ಸೇರ್ಪಡೆಯಾದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ | Photo Credit : PTI
ಹೊಸದಿಲ್ಲಿ, ಮೇ 6: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಔಟಾಗದೆ 87 ರನ್ ಗಳಿಸಿರುವ ಸಂಜು ಸ್ಯಾಮ್ಸನ್ ಅವರು ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರಿದ್ದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ನಿಂದ ಚೆನ್ನೈ ಸೂಪರ್ ಕಿಂಗ್ಸ್ಗೆ 18 ಕೋಟಿ ರೂ.ಗೆ ವರ್ಗಾವಣೆಯಾಗಿ ಇತಿಹಾಸ ನಿರ್ಮಿಸಿದ್ದ ಸ್ಯಾಮ್ಸನ್, ಪ್ರಸಕ್ತ ಟೂರ್ನಿಯಲ್ಲಿ ಅಗ್ರ ಐದು ರನ್ ಸ್ಕೋರರ್ ಗಳ ಪೈಕಿ ಒಬ್ಬರಾಗಿದ್ದಾರೆ. 10 ಪಂದ್ಯಗಳಲ್ಲಿ 57.42ರ ಸರಾಸರಿಯಲ್ಲಿ ಒಟ್ಟು 402 ರನ್ ಗಳಿಸಿರುವ ಸ್ಯಾಮ್ಸನ್ ಅವರು ಆರೆಂಜ್ ಕ್ಯಾಪ್ ರೇಸ್ ನಲ್ಲಿದ್ದಾರೆ.
ಡೆಲ್ಲಿ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ 52 ಎಸೆತಗಳಲ್ಲಿ 87 ರನ್ ಗಳಿಸಿದ್ದು, ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಒಂದೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡು ಬಾರಿ 100ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಔಟಾಗದೆ 115 ರನ್ ಗಳಿಸಿದ್ದರು. ಈ ಮೂಲಕ ಈ ವರ್ಷ ತಮ್ಮ ಮೊದಲ ಶತಕ ದಾಖಲಿಸಿದ್ದರು. ಸ್ಯಾಮ್ಸನ್ ಈ ವರ್ಷ ಡೆಲ್ಲಿ ತಂಡದ ವಿರುದ್ಧವೇ ಒಟ್ಟು 202 ರನ್ ಗಳಿಸಿದ್ದಾರೆ. ಒಂದೇ ಆವೃತ್ತಿಯ ಐಪಿಎಲ್ನಲ್ಲಿ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರು ಸ್ಯಾಮ್ಸನ್ಗಿಂತ ಮುಂದಿದ್ದಾರೆ. ಕೊಹ್ಲಿ 2016ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಒಟ್ಟು 209 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕಗಳಿದ್ದವು. ಆ ಋತುವಿನಲ್ಲಿ ಕೊಹ್ಲಿ 16 ಇನಿಂಗ್ಸ್ಗಳಲ್ಲಿ 973 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.
2022ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಒಟ್ಟು 206 ರನ್ ಗಳಿಸಿರುವ ಕೆ.ಎಲ್. ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್ ಅವರು ಮುಂಬೈ ತಂಡದ ವಿರುದ್ಧ ಒಂದೇ ಋತುವಿನಲ್ಲಿ ಅವಳಿ ಶತಕಗಳನ್ನು ಸಿಡಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮಂಗಳವಾರ ಎಂಟು ವಿಕೆಟ್ ಗಳ ಅಂತರದಿಂದ ಜಯಶಾಲಿಯಾದ ಸಿಎಸ್ಕೆ ತಂಡವು ಪ್ಲೇ ಆಫ್ ಹಂತಕ್ಕೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ. ಅಕೀಲ್ ಹುಸೇನ್ ಹಾಗೂ ನೂರ್ ಅಹ್ಮದ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ತಂಡವನ್ನು 7 ವಿಕೆಟ್ ಗಳ ನಷ್ಟಕ್ಕೆ 155 ರನ್ಗೆ ನಿಯಂತ್ರಿಸಿದ್ದ ಸಿಎಸ್ಕೆ ತಂಡವು 17.3 ಓವರ್ ಗಳಲ್ಲಿ ಗುರಿ ತಲುಪಿತು.
►ಐಪಿಎಲ್ ನಲ್ಲಿ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ ಗಳಿಸಿದ ಟಾಪ್-5 ಬ್ಯಾಟರ್ ಗಳು
209: ವಿರಾಟ್ ಕೊಹ್ಲಿ, ಗುಜರಾತ್ ಲಯನ್ಸ್ ವಿರುದ್ಧ, 2016ರಲ್ಲಿ (ಔಟಾಗದೆ 100, 109)
206: ಕೆ.ಎಲ್. ರಾಹುಲ್, ಮುಂಬೈ ಇಂಡಿಯನ್ಸ್ ವಿರುದ್ಧ, 2022ರಲ್ಲಿ (ಔಟಾಗದೆ 103, ಔಟಾಗದೆ 103)
202: ಸಂಜು ಸ್ಯಾಮ್ಸನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, 2026ರಲ್ಲಿ (ಔಟಾಗದೆ 115, ಔಟಾಗದೆ 87)
196: ಕ್ರಿಸ್ ಗೇಲ್, ಪಂಜಾಬ್ ವಾರಿಯರ್ಸ್ ವಿರುದ್ಧ, 2013ರಲ್ಲಿ (ಔಟಾಗದೆ 175, 21)
193: ಕೆ.ಎಲ್. ರಾಹುಲ್, ಆರ್ಸಿಬಿ ವಿರುದ್ಧ, 2020ರಲ್ಲಿ (ಔಟಾಗದೆ 132, ಔಟಾಗದೆ 61)






