IPL 2026 | ಹ್ಯಾಟ್ರಿಕ್ ಸೋಲಿನ ಬಳಿಕ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್

PC | X@IPL
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಶಕ್ತಿ ಅನಾವರಣಗೊಂಡಿತು. ಚೆನ್ನೈ ಪರ ಮೊದಲ ಮೂರು ಪಂದ್ಯಗಳಲ್ಲಿ 6, 7 ಹಾಗೂ 9 ರನ್ ಮಾತ್ರಗಳಿಸಿದ್ದ ಸಂಜು ನಾಲ್ಕನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಸೋಲಿನ ಬಳಿಕ ಸಿಎಸ್ಕೆ ಗೆಲುವಿನ ಖಾತೆ ತೆರೆಯಿತು.
ಕಳೆದ ಮಾರ್ಚ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಮೂರು ಅರ್ಧಶತಕಗಳೊಂದಿಗೆ ಭಾರತ ಕಪ್ ಗೆಲ್ಲಲು ಕೊಡುಗೆ ನೀಡಿದ್ದ ಸಂಜು ಬಗ್ಗೆ ಪ್ರಸಕ್ತ ಐಪಿಎಲ್ನಲ್ಲಿ ಭಾರಿ ಭರವಸೆ ಇತ್ತು. ಶನಿವಾರದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 115 ರನ್ ಸಿಡಿಸುವ ಮೂಲಕ ತಂಡ ತಮ್ಮ ಮೇಲೆ ಇಟ್ಟ ಭರವಸೆಯನ್ನು ಉಳಿಸಿಕೊಂಡರು. ಆಯುಷ್ ಮ್ಹಾತ್ರೆ 36 ಎಸೆತಗಳಲ್ಲಿ 59 ರನ್ ಸಿಡಿಸಿ ಸಂಜುಗೆ ಸಾಥ್ ನೀಡುವ ಮೂಲಕ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಲು ಸಾಧ್ಯವಾಯಿತು. ಈ ಜೋಡಿ ಎರಡನೇ ವಿಕೆಟ್ಗೆ 113 ರನ್ ಗಳಿಸಿತು.
"ಇದು ನನಗೆ ದೊಡ್ಡದು, ಅವರು ಇರಿಸಿದ ವಿಶ್ವಾಸ, ಹೆಚ್ಚಿನ ಹೊಣೆಗಾರಿಕೆ ನೀಡಿತು. ಅದೃಷ್ಟವೆಂದರೆ ಪ್ರತಿಯೊಂದೂ ಸುಲಲಿತವಾಯಿತು. ನನಗೆ ಬೇರೆ ಫ್ರಾಂಚೈಸಿ ಎನಿಸಲೇ ಇಲ್ಲ" ಎಂದು ರಾಜಸ್ಥಾನ ರಾಯಲ್ಸ್ ನಿಂದ ಬಂದ ಸ್ಯಾಮ್ಸನ್ ಬಣ್ಣಿಸಿದರು.
"ಸಹ ಆಟಗಾರರು ಒಳ್ಳೆಯವರು, ಮೂರು ಪಂದ್ಯಗಳನ್ನು ಸೋತ ಬಳಿಕವೂ ನಾವು ಇಂದು 50 ಸೆಕೆಂಡ್ ಭೇಟಿ ಮಾಡಿದೆವು" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್ಸನ್ ಬಣ್ಣಿಸಿದರು.
"ನಾನು ಸಾಕಷ್ಟು ವಿಫಲನಾಗಿದ್ದೆ. ಮನಸ್ಸು ಚಂಚಲವಾಗಿತ್ತು. ನನ್ನ ಮೂಲಭೂತ ಅಂಶಗಳೇನು ಎಂದು ನಾನು ತಿಳಿದುಕೊಳ್ಳಬೇಕಿತ್ತು. ಮೂಲವನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿತ್ತು. ಬೆಂಬಲ ಸಿಬ್ಬಂದಿಯೊಂದಿಗೆ ಒಳ್ಳೆಯ ಸಂವಾದ ನಡೆಯಿತು" ಎಂದು ವಿವರಿಸಿದರು.
ಇದು ಸ್ಯಾಮ್ಸನ್ ಅವರ ನಾಲ್ಕನೇ ಐಪಿಎಲ್ ಶತಕವಾಗಿದ್ದು, ಸಿಎಸ್ಕೆ ಪರ ಹಾಗೂ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಶತಕ. ಮೊದಲ ಮೂರು ಪಂದ್ಯಗಳನ್ನು ನಿರಾಶಾದಾಯಕವಾಗಿ ಆರಂಭಿಸಿದ ಬಳಿಕ ಇಂದಿನ ಭರ್ಜರಿ ಪ್ರದರ್ಶನ ನಿಜಕ್ಕೂ ಚೇತೋಹಾರಿಯಾಗಿತ್ತು.







