33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿರುವ ಸಾರಾಂಶ್ ಜೈನ್ ಯಾರು?

ಸಾರಾಂಶ್ ಜೈನ್ |Photo Credit : BCCI
ಹೊಸದಿಲ್ಲಿ: ಶ್ರೀಲಂಕಾ ತಂಡದೆದುರು ನಡೆಯಲಿರುವ ಎರಡು ಟೆಸ್ಟ್ ಸರಣಿಗೆ ಮಂಗಳವಾರ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ 33 ವರ್ಷದ ಮಧ್ಯಪ್ರದೇಶ ಆಲ್ ರೌಂಡರ್ ಸಾರಾಂಶ್ ಜೈನ್ ಕೂಡಾ ಸ್ಥಾನ ಪಡೆದಿದ್ದಾರೆ.
ಶುಭಮನ್ ಗಿಲ್ ನಾಯಕತ್ವದಲ್ಲಿ ಪ್ರಕಟಿಸಲಾಗಿರುವ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ಸಾರಾಂಶ್ ಜೈನ್, ಚೊಚ್ಚಲ ಬಾರಿಗೆ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ತೋರಿದ್ದ ಸಾರಾಂಶ್ ಜೈನ್, ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿರುವುದು ಅಷ್ಟೇನೂ ಅಚ್ಚರಿಗೆ ಕಾರಣವಾಗಿಲ್ಲ. ದೇಶೀಯ ಕ್ರಿಕೆಟ್ ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಸಾರಾಂಶ್ ಜೈನ್, ಅರ್ಹವಾಗಿಯೇ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸ್ನಾಯುಸೆಳೆತಕ್ಕೆ ಗುರಿಯಾಗಿರುವ ವಾಷಿಂಗ್ಟನ್ ಸುಂದರ್ ರ ಲಭ್ಯತೆ ಅವರ ದೈಹಿಕ ಸಾಮರ್ಥ್ಯವನ್ನು ಅವಲಂಬಿಸಿರುವ ಹೊತ್ತಿನಲ್ಲಿ ಸಾರಾಂಶ್ ಜೈನ್ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಲಭ್ಯತೆ ಇನ್ನೂ ಅನಿಶ್ಚಿತವಾಗಿರುವುದರಿಂದ, ಎಡಗೈ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಕುಲ್ ದೀಪ್ ಯಾದವ್ ಹಾಗೂ ಮಾನವ್ ಸುತರ್ ರೊಂದಿಗೆ ಸಮತೋಲನ ಸಾಧಿಸಲು ಕೆಳಕ್ರಮಾಂಕದಲ್ಲಿ ಮೌಲ್ಯಯುತ ಬ್ಯಾಟಿಂಗ್ ಪ್ರದರ್ಶನದ ಸಾಮರ್ಥ್ಯ ಹೊಂದಿರುವ ಆಲ್ ರೌಂಡರ್ ಸಾರಾಂಶ್ ಜೈನ್ ಗೆ ಆಯ್ಕೆದಾರರು ಮಣೆ ಹಾಕಿದ್ದಾರೆ.
ಇದಕ್ಕೂ ಮುನ್ನ, ಭಾರತ ಎ ತಂಡದ ಪರವಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಾರಾಂಶ್ ಜೈನ್, ಎರಡು ಪಂದ್ಯಗಳಲ್ಲಿ ಆರು ವಿಕೆಟ್ ಕಿತ್ತಿದ್ದರಲ್ಲದೆ, ಅಜೇಯ 70 ರನ್ ಗಳನ್ನೂ ಕಲೆ ಹಾಕಿದ್ದರು. ಈ ಪ್ರವಾಸದಲ್ಲಿನ ಅವರ ಪ್ರದರ್ಶನ, ಭಾರತ ಟೆಸ್ಟ್ ಕ್ರಿಕೆಟ್ ತಂಡದ ಭಾಗವಾಗಲು ಅವರಿಗೆ ಅವಕಾಶ ಒದಗಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮಧ್ಯಪ್ರದೇಶದ ಇಂದೋರ್ ಮೂಲದವರಾದ ಸಾರಾಂಶ್ ಜೈನ್, 2014-15ನೇ ಸಾಲಿನಲ್ಲಿ ತಮ್ಮ ತಂಡದ ಅತಿ ಹೆಚ್ಚು ವಿಶ್ವಾಸಾರ್ಹ ಆಟಗಾರರಾಗಿ ಹೊರಹೊಮ್ಮಿದ್ದರು. ಇದುವರೆಗೆ 54 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸಾರಾಂಶ್ ಜೈನ್, 31.75 ರನ್ ಸರಾಸರಿಯಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲೂ ಉತ್ತಮ ದಾಖಲೆ ಹೊಂದಿರುವ ಅವರು, 27.30 ಸರಾಸರಿಯಲ್ಲಿ 188 ವಿಕೆಟ್ ಗಳನ್ನು ಕಿತ್ತಿದ್ದಾರೆ.






