ಸತತ ಎರಡನೇ ಶತಕ ಸಿಡಿಸಿ ಆಯ್ಕೆಗಾರರಿಗೆ ಸಂದೇಶ ರವಾನಿಸಿದ ಸರ್ಫರಾಝ್

ಸರ್ಫರಾಝ್ ಖಾನ್ | PC: @Cricketracker
ಮುಂಬೈ, ಆ.26: ಸತತ ಎರಡನೇ ಶತಕವನ್ನು ಸಿಡಿಸಿರುವ ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್ ತನ್ನ ಸ್ಥಿರ ಪ್ರದರ್ಶನದ ಮೂಲಕ ಅಕ್ಟೋಬರ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಿಂತ ಮೊದಲು ಆಯ್ಕೆಗಾರರಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.
ಚೆನ್ನೈನಲ್ಲಿ ಮಂಗಳವಾರ ನಡೆದ ಬುಚಿ ಬಾಬು ಟೂರ್ನಮೆಂಟ್ ನಲ್ಲಿ ಹರ್ಯಾಣ ವಿರುದ್ಧದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಸರ್ಫರಾಝ್ ಅವರು ಕೇವಲ 109 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ ಔಟಾಗದೆ 109 ರನ್ ಗಳಿಸಿದರು. ಈ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಶತಕ ದಾಖಲಿಸಿದರು.
84 ರನ್ಗೆ 4 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಮುಂಬೈ ತಂಡಕ್ಕೆ ಆಸರೆಯಾದ ಮಧ್ಯಮ ಸರದಿಯ ಬ್ಯಾಟರ್ ಸರ್ಫರಾಝ್ ವಿಕೆಟ್ಕೀಪರ್-ಬ್ಯಾಟರ್ ಹಾರ್ದಿಕ್ ಟಾಮೋರೆ(39 ರನ್, 73 ಎಸೆತ)ಅವರೊಂದಿಗೆ 5ನೇ ವಿಕೆಟ್ಗೆ 117 ರನ್ ಜೊತೆಯಾಟ ನಡೆಸಿದರು.
ಸರ್ಫರಾಝ್ ಆ.18ರಂದು ಟಿಎನ್ಸಿಎ ಇಲೆವೆನ್ ತಂಡದ ವಿರುದ್ದ ಮುಂಬೈ ಆಡಿದ್ದ ಮೊದಲ ಪಂದ್ಯದಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ಗಳ ಸಹಿತ 138 ರನ್ ಗಳಿಸಿದ್ದರು. ಬಂಗಾಳ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಆಡದ 27ರ ಹರೆಯದ ಸರ್ಫರಾಝ್ ಇದೀಗ ಹರ್ಯಾಣ ವಿರುದ್ಧ ಆಡುವ 11ರ ಬಳಗಕ್ಕೆ ವಾಪಸಾಗಿದ್ದಾರೆ.
ಇದಕ್ಕೂ ಮೊದಲು ಆರಂಭಿಕ ಆಟಗಾರರಾದ ದಿವ್ಯಾಂಶ್ ಸಕ್ಸೇನ(46 ರನ್, 106 ಎಸೆತ)ಹಾಗೂ ಮುಶೀರ್ ಖಾನ್(30 ರನ್, 66 ಎಸೆತ) 132 ಎಸೆತಗಳಲ್ಲಿ 69 ರನ್ ಜೊತೆಯಾಟ ನಡೆಸಿ ಮುಂಬೈಗೆ ಉತ್ತಮ ಆರಂಭ ಒದಗಿಸಿದ್ದಾರೆ.
ಮುಂಬೈ ತಂಡ 247 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದು, ಹರ್ಯಾಣದ ಪರ ಆಫ್ ಸ್ಪಿನ್ನರ್ ನಿಖಿಲ್ ಕಶ್ಯಪ್(4-20)ಬೌಲಿಂಗ್ ನಲ್ಲಿ ಮಿಂಚಿದ್ದಾರೆ.
ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಭಾರತದ ಅಂಡರ್-19 ನಾಯಕ ಆಯುಷ್ ಮ್ಹಾತ್ರೆ ಮುಂಬೈ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಸ್ಪಿನ್ ಆಲ್ರೌಂಡರ್ ತನುಷ್ ಕೋಟ್ಯಾನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸೆ.4ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಸೆಮಿ ಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು ಕೋಟ್ಯಾನ್, ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ ಹಾಗೂ ಸೂಯಂಶ್ ಶೆಡ್ಗೆ ಮುಂಬೈ ಇಲೆವೆನ್ ಗೆ ವಾಪಸಾಗಿದ್ದಾರೆ.







