ಇರಾನಿ ಕಪ್ನಲ್ಲಿ ದ್ವಿಶತಕ ಗಳಿಸಿದ ಮುಂಬೈನ ಮೊದಲ ಬ್ಯಾಟರ್ ಸರ್ಫರಾಝ್ ಖಾನ್
ಸರ್ಫರಾಝ್ ಖಾನ್ | PC : PTI
ಹೊಸದಿಲ್ಲಿ: ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಆಡುವ 11ರ ಬಳಗಕ್ಕೆ ಪರಿಗಣಿಸಲ್ಪಡದ ಉದಯೋನ್ಮುಖ ಸ್ಟಾರ್ ಬ್ಯಾಟರ್ ಸರ್ಫರಾಝ್ ಖಾನ್ ಬುಧವಾರ ಲಕ್ನೊದ ಎಕಾನಾ ಸ್ಟೇಡಿಯಮ್ನಲ್ಲಿ ಶೇಷ ಭಾರತ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ತಂಡದ ಪರ ದ್ವಿಶತಕ ಸಿಡಿಸಿದರು.
2024ರಲ್ಲಿ ತನ್ನ ಮೊದಲ ದ್ವಿಶತಕ ಗಳಿಸಿದ ಸರ್ಫರಾಝ್ ಅವರು ಮುಂಬೈ ತಂಡ ಎರಡನೇ ದಿನದಾಟದಲ್ಲಿ 500ಕ್ಕೂ ಅಧಿಕ ರನ್ ಗಳಿಸಲು ನೆರವಾದರು.
ಈ ಮಹತ್ವದ ಇನಿಂಗ್ಸ್ನೊಂದಿಗೆ ಸರ್ಫರಾಝ್ ಅವರು ಇರಾನಿ ಕಪ್ನಲ್ಲಿ ದ್ವಿಶತಕ ಗಳಿಸಿದ ಮುಂಬೈನ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 26ರ ಹರೆಯದ ಸರ್ಫರಾಝ್ ಅವರು 1972ರಲ್ಲಿ ಪುಣೆಯಲ್ಲಿ 195 ರನ್ ಗಳಿಸಿದ್ದ ರಾಮನಾಥ್ ಪಾರ್ಕರ್ ಅವರ ದಾಖಲೆಯನ್ನು ಮುರಿದರು.
ದಿನದಾರಂಭದಲ್ಲಿ 95 ರನ್ ಗಳಿಸಿದ್ದಾಗ ಪ್ರಸಿದ್ಧ ಕೃಷ್ಣರಿಂದ ಜೀವದಾನ ಪಡೆದಿದ್ದ ಸರ್ಫರಾಝ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತನ್ನ 15ನೇ ಶತಕ ಗಳಿಸಿದರು. ಇನಿಂಗ್ಸ್ನ 127ನೇ ಓವರ್ನಲ್ಲಿ 253ನೇ ಎಸೆತಗಳಲ್ಲಿ 23 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ ದ್ವಿಶತಕ ಪೂರೈಸಿದರು.
ಈ ಹಿಂದೆ ಇರಾನಿ ಕಪ್ನಲ್ಲಿ ಮುಂಬೈನ ವಸೀಂ ಜಾಫರ್, ರವಿ ಶಾಸ್ತ್ರಿ ಹಾಗೂ ಯಶಸ್ವಿ ಜೈಸ್ವಾಲ್ ದ್ವಿಶತಕ ಗಳಿಸಿದ್ದರು. ಆದರೆ ಇವರೆಲ್ಲರೂ ಶೇಷ ಭಾರತದ ಪರ ಈ ಸಾಧನೆ ಮಾಡಿದ್ದರು.
ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಒಂದು ರನ್ ಗಳಿಸಿ 200 ರನ್ ತಲುಪಿದ ತಕ್ಷಣ ಸರ್ಫರಾಝ್ ಅವರು ತನ್ನ ಹೆಲ್ಮೆಟ್ ತೆಗೆದು ಸಂಭ್ರಮಿಸಿದರು. ಆಗ ಡ್ರೆಸ್ಸಿಂಗ್ ರೂಮ್ನಲ್ಲಿ ಸಹ ಆಟಗಾರರು ಹಾಗೂ ಸ್ಟೇಡಿಯಮ್ನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಗೌರವ ನೀಡಿದರು.
ದ್ವಿಶತಕ ಗಳಿಸುವ ಮೂಲಕ ಸರ್ಫರಾಝ್ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಬ್ಯಾಟರ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಸರ್ಫರಾಝ್ (69.6)ಅವರು ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತಮ ಸರಾಸರಿ ಹೊಂದಿದ್ದ ಅಜಯ್ ಶರ್ಮಾ(68.7)ರನ್ನು ಹಿಂದಿಕ್ಕಿದರು. ಸರ್ಫರಾಝ್ ಅವರು ಲೆಜೆಂಡರಿ ವಿಜಯ್ ಮರ್ಚೆಂಟ್ ನಂತರದ ಸ್ಥಾನದಲ್ಲಿದ್ದಾರೆ. ಮರ್ಚೆಂಟ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 81.8 ಸರಾಸರಿ ಹೊಂದಿದ್ದಾರೆ.
ದೇಶೀಯ ಕ್ರಿಕೆಟ್ನ ರನ್ ಯಂತ್ರ ಎನಿಸಿಕೊಂಡಿರುವ ಸರ್ಫರಾಝ್ ಈ ವರ್ಷದ ಆದಿಯಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯ ತಂಡದ ಭಾಗವಾಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾ ಅವರು ಕೆ.ಎಲ್.ರಾಹುಲ್ಗೆ ಆದ್ಯತೆ ನೀಡಿ ಆಡುವ ಬಳಗಕ್ಕೆ ಸೇರಿಸಿಕೊಂಡರು.
ಈಗ ಮತ್ತೊಂದು ಅಮೋಘ ಪ್ರಯತ್ನದ ಮೂಲಕ ಸರ್ಫರಾಝ್ ಅವರು ಮುಂಬರುವ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಆಡುವ 11ರ ಬಳಗದಲ್ಲಿ ತನ್ನನ್ನು ಸೇರಿಸಿಕೊಳ್ಳಲೇಬೇಕೆಂಬ ಬಲವಾದ ಸಂದೇಶ ರವಾನಿಸಿದ್ದಾರೆ.