ಬುಚಿ ಬಾಬು ಟ್ರೋಫಿ ಟೂರ್ನಮೆಂಟ್ | ಮುಂಬೈ ಪರ ಮಿಂಚಿನ ಶತಕ ದಾಖಲಿಸಿದ ಸರ್ಫರಾಝ್ ಖಾನ್

ಸರ್ಫರಾಝ್ ಖಾನ್ | PTI
ಚೆನ್ನೈ, ಆ.18: ಭಾರತದ ಮಧ್ಯಮ ಸರದಿಯ ಬ್ಯಾಟರ್ ಸರ್ಫರಾಝ್ ಖಾನ್ ಬುಚಿ ಬಾಬು ಟ್ರೋಫಿ ಟೂರ್ನಮೆಂಟ್ ನ ಮೊದಲ ದಿನ ಟಿಎನ್ಸಿಎ ಇಲೆವೆನ್ ವಿರುದ್ಧ ಮುಂಬೈ ಕ್ರಿಕೆಟ್ ತಂಡದ ಪರ ಮಿಂಚಿನ ವೇಗದಲ್ಲಿ ಶತಕ ದಾಖಲಿಸಿದ್ದಾರೆ.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಸರ್ಫರಾಝ್ ಕೇವಲ 92 ಎಸೆತಗಳಲ್ಲಿ ತನ್ನ ಶತಕವನ್ನು ಪೂರೈಸಿದರು. ಆಕಾಶ್ ಪಾರ್ಕರ್ ಅವರೊಂದಿಗೆ ಆರನೇ ವಿಕೆಟ್ ಗೆ 129 ರನ್ ಜೊತೆಯಾಟದಲ್ಲಿ ಭಾಗಿಯಾದರು. ಸರ್ಫರಾಝ್ ಅಂತಿಮವಾಗಿ 114 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ಗಳ ಒಳಗೊಂಡ 138 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾದರು.
ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಕಡೆಗಣಿಸಲ್ಪಟ್ಟಿರುವ 27ರ ಹರೆಯದ ಸರ್ಫರಾಝ್ ಮತ್ತೊಮ್ಮೆ ತಂಡಕ್ಕೆ ವಾಪಸಾಗಲು ಪ್ರಯತ್ನಿಸುತ್ತಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಸರ್ಫರಾಝ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರು 5 ಪಂದ್ಯಗಳ ಸರಣಿಯಲ್ಲಿ ಒಂದೂ ಪಂದ್ಯ ಆಡಿರಲಿಲ್ಲ.
ಕಳೆದ ವರ್ಷ ನ್ಯೂಝಿಲ್ಯಾಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು. ಬೆಂಗಳೂರಿನಲ್ಲಿ ಕಿವೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 150 ರನ್ ಗಳಿಸಿದ್ದ ಸರ್ಫರಾಝ್ ಆ ನಂತರ 4 ಇನಿಂಗ್ಸ್ ಗಳಲ್ಲಿ ಕೇವಲ 21 ರನ್ ಗಳಿಸಿದ್ದರು. ಭಾರತವು ಸ್ವದೇಶದಲ್ಲಿ 0-3 ಅಂತರದಿಂದ ಸರಣಿ ಸೋತಿತ್ತು.
ಈ ತನಕ 6 ಟೆಸ್ಟ್ ಪಂದ್ಯಗಳಲ್ಲಿ 11 ಟೆಸ್ಟ್ ಇನಿಂಗ್ಸ್ ಆಡಿರುವ ಸರ್ಫರಾಝ್ 37.10ರ ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಇತ್ತೀಚೆಗೆ ಕೊನೆಗೊಂಡಿರುವ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಸರಣಿಯಲ್ಲಿ ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್ ನಲ್ಲಿ ದೊಡ್ಡ ಕೊಡುಗೆ ನೀಡದ ಕಾರಣ ಸರ್ಫರಾಝ್ ಗೆ ಮುಂಬರುವ ಸ್ವದೇಶಿ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಸುವರ್ಣಾವಕಾಶ ಲಭಿಸಿದೆ.
5 ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ಭಾರತ ‘ಎ’ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ಸರ್ಫರಾಝ್ ಅವರು 92 ರನ್ ಗಳಿಸಿದ್ದರು.







