ಡೈಮಂಡ್ ಲೀಗ್ ನಲ್ಲಿ ಐತಿಹಾಸಿಕ ಸಾಧನೆ: ಚೊಚ್ಚಲ ಸ್ಪರ್ಧೆಯಲ್ಲೇ ಮೂರನೇ ಸ್ಥಾನ ಪಡೆದ ಭಾರತದ ಸರ್ವೇಶ್ ಕುಶಾರೆ

Photo source: Instagram/@sarveshkushare_hj
ಮೊನಾಕೊ: ಭಾರತದ ಹೈಜಂಪ್ ರಾಷ್ಟ್ರೀಯ ದಾಖಲೆ ಹೊಂದಿರುವ ಸರ್ವೇಶ್ ಅನಿಲ್ ಕುಶಾರೆ, ಡೈಮಂಡ್ ಲೀಗ್ ಚೊಚ್ಚಲ ಸ್ಪರ್ಧೆಯಲ್ಲೇ ಮೂರನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಡೈಮಂಡ್ ಲೀಗ್ ಚೊಚ್ಚಲ ಸ್ಪರ್ಧೆಯಲ್ಲೇ ಅಗ್ರ–3ರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ವಿಶ್ವದ ಅಗ್ರ ಆಟಗಾರರಾದ ವಿಶ್ವ ನಂ.1 ಓಲೆಹ್ ಡೊರೊಶ್ಚುಕ್, ಮಾಜಿ ಒಲಿಂಪಿಕ್ ಚಾಂಪಿಯನ್ ಮುತಾಜ್ ಬರ್ಶಿಮ್, ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತ ಜಾನ್ ಸ್ಟೆಫೆಲಾ ಹಾಗೂ ಜ್ಯಾಕ್ ಕಿಮಾನಿ ಅವರೊಂದಿಗೆ ಕುಶಾರೆ ಸ್ಪರ್ಧಿಸಿದರು. 2.26 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟಿದ ಅವರು ಮೂರನೇ ಸ್ಥಾನ ಪಡೆದರು.
ಡೊರೊಶ್ಚುಕ್ 2.32 ಮೀಟರ್ ಜಿಗಿದು ಪ್ರಶಸ್ತಿ ಗೆದ್ದರೆ, ಕಿಮಾನಿ 2.30 ಮೀಟರ್ ಜಿಗಿದು ಎರಡನೇ ಸ್ಥಾನ ಪಡೆದರು. ಕುಶಾರೆ 2.28 ಮೀಟರ್ ಎತ್ತರವನ್ನು ದಾಟಲು ಮೂರು ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ.
ಈ ಸಾಧನೆಯೊಂದಿಗೆ ಕುಶಾರೆ ಡೈಮಂಡ್ ಲೀಗ್ನಲ್ಲಿ ಅಗ್ರ–3ರಲ್ಲಿ ಸ್ಥಾನ ಪಡೆದ ಭಾರತೀಯರ ಪಟ್ಟಿಗೆ ಸೇರಿದರು. ಈ ಹಿಂದೆ ನೀರಜ್ ಚೋಪ್ರಾ, ವಿಕಾಸ್ ಗೌಡ ಹಾಗೂ ಶ್ರೀಶಂಕರ್ ಮುರಳಿ ಡೈಮಂಡ್ ಲೀಗ್ನಲ್ಲಿ ಅಗ್ರ–3ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಚೊಚ್ಚಲ ಸ್ಪರ್ಧೆಯಲ್ಲೇ ಅಗ್ರ–3ರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕುಶಾರೆ ನಿರ್ಮಿಸಿದರು.
ಮಹಾರಾಷ್ಟ್ರದ 31 ವರ್ಷದ ಕುಶಾರೆ, 2.16 ಮೀಟರ್ ನಿಂದ ಸ್ಪರ್ಧೆ ಆರಂಭಿಸಿದರು. ನಂತರ 2.20, 2.23 ಹಾಗೂ 2.26 ಮೀಟರ್ ಎತ್ತರಗಳನ್ನು ಯಾವುದೇ ಫೌಲ್ ಇಲ್ಲದೇ ದಾಟಿದರು. ಆದರೆ 2.28 ಮೀಟರ್ ಎತ್ತರವನ್ನು ದಾಟಲು ಸಾಧ್ಯವಾಗದ ಕಾರಣ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
2025ರ ಟೋಕಿಯೊ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಆರನೇ ಸ್ಥಾನ ಪಡೆದಿದ್ದ ಕುಶಾರೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇದು ಎರಡನೇ ಪ್ರಮುಖ ಅಂತರರಾಷ್ಟ್ರೀಯ ಸಾಧನೆಯಾಗಿದೆ. ಪ್ರಸ್ತುತ ವಿಶ್ವ ರ್ಯಾಂಕಿಂಗ್ ನಲ್ಲಿ ಒಂಭತ್ತನೇ ಸ್ಥಾನದಲ್ಲಿರುವ ಅವರು, ಈ ಋತುವಿನಲ್ಲಿ ದಾಖಲಿಸಿರುವ 2.31 ಮೀಟರ್ ಸಾಧನೆಯನ್ನು ವಿಶ್ವದ ಕೇವಲ ಮೂವರು ಹೈಜಂಪ್ ಆಟಗಾರರು ಮಾತ್ರ ಮೀರಿಸಿದ್ದಾರೆ.
ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ ಅಂತರರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕುಶಾರೆ 2.31 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ಮೂಲಕ 2018ರಲ್ಲಿ ತೇಜಸ್ವಿನ್ ಶಂಕರ್ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.
"ನಾನು ನಾಲ್ಕು ವರ್ಷಗಳಿಂದ ಈ ದಾಖಲೆಯನ್ನು ಬೆನ್ನಟ್ಟುತ್ತಿದ್ದೇನೆ. 2022ರಲ್ಲಿ 2.27 ಮೀಟರ್ ಜಿಗಿದಿದ್ದೆ. ಆದರೆ ಹಲವು ವರ್ಷಗಳ ಕಾಲ ಅದೇ ಸಾಧನೆಯೊಂದಿಗೆ ಉಳಿದಿದ್ದೆ," ಎಂದು ಕುಶಾರೆ ಈ ಹಿಂದೆ The Indian Express ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
2022ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 2.27 ಮೀಟರ್ ಜಿಗಿದ ಬಳಿಕ ಮೂರು ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಲು ಅವರು ಪ್ರಯತ್ನ ಮುಂದುವರಿಸಿದ್ದರು. ನಂತರ ವಿಶ್ವ ಚಾಂಪಿಯನ್ಷಿಪ್ನಲ್ಲಿ 2.28 ಮೀಟರ್ಗೆ ತಮ್ಮ ಸಾಧನೆಯನ್ನು ಹೆಚ್ಚಿಸಿಕೊಂಡ ಅವರು, ಭುವನೇಶ್ವರದಲ್ಲಿ 2.31 ಮೀಟರ್ ಜಿಗಿದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.
"2.30 ಮೀಟರ್ ಸಮೀಪಿಸಿದಾಗಲೆಲ್ಲಾ ಅವರು ಹೆಚ್ಚು ಯೋಚಿಸುತ್ತಿದ್ದರು. ನಾನೂ ಅಷ್ಟೇ ಯೋಚಿಸುತ್ತಿದ್ದೆ. ಆದರೆ ಇಂದು ನಮ್ಮಿಬ್ಬರೂ ಯಾವುದೇ ಒತ್ತಡವಿಲ್ಲದೆ ಸ್ಪರ್ಧಿಸಿದ್ದೇವೆ. ಅದಕ್ಕಾಗಿಯೇ ಈ ಸಾಧನೆ ಸಾಧ್ಯವಾಯಿತು," ಎಂದು ಕುಶಾರೆ ಅವರ ತರಬೇತುದಾರ ಜಿತಿನ್ ಥಾಮಸ್ ಹೇಳಿದರು.






