ಆಲ್ ಇಂಗ್ಲೆಂಡ್ ಓಪನ್-2025: ಸಾತ್ವಿಕ್-ಚಿರಾಗ್ ಶುಭಾರಂಭ

ಸಾತ್ವಿಕ್-ಚಿರಾಗ್ | PTI
ಲಂಡನ್: ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಸ್ಪರ್ಧಾವಳಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಬುಧವಾರ ಕೇವಲ 40 ನಿಮಿಷಗಳಲ್ಲಿ ಅಂತ್ಯಗೊಂಡ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಡೆನ್ಮಾರ್ಕ್ನ ಡೇನಿಯಲ್ ಲುಂಡ್ಗಾರ್ಡ್ ಹಾಗೂ ಮ್ಯಾಡ್ಸ್ ವೆಸ್ಟರ್ಗಾರ್ಡ್ ಅವರನ್ನು 21-17, 21-15 ನೇರ ಗೇಮ್ಗಳ ಅಂತರದಿಂದ ಮಣಿಸಿತು.
ಕಳೆದ ತಿಂಗಳು ತನ್ನ ತಂದೆಯನ್ನು ಕಳೆದುಕೊಂಡ ನಂತರ ಬ್ಯಾಡ್ಮಿಂಟನ್ ಅಂಗಣಕ್ಕೆ ಮರಳಿರುವ ಸಾತ್ವಿಕ್ ತನ್ನ ಡಬಲ್ಸ್ ಜೊತೆಗಾರ ಚಿರಾಗ್ ಜೊತೆ ಉತ್ತಮ ಪ್ರದರ್ಶನ ನೀಡಿದರು.
ಸಾತ್ವಿಕ್ ಗೆಲುವು ದಾಖಲಿಸಿದ ಮರು ಕ್ಷಣವೇ ಆಕಾಶದತ್ತ ತನ್ನ ಬೆರಳನ್ನು ತೋರಿಸಿ, ತನ್ನ ದೃಷ್ಟಿಯನ್ನು ದಿಗಂತದೆಡೆಗೆ ನೆಟ್ಟಿದರು. ಬಹುಶಃ ಅವರು ಗೆಲುವನ್ನು ಅಗಲಿರುವ ತನ್ನ ತಂದೆಗೆ ಅರ್ಪಿಸಿರಬಹುದು.
‘‘ನನ್ನ ಕಷ್ಟದ ಸಮಯದಲ್ಲಿ ಅವರು(ಚಿರಾಗ್)ನನ್ನ ಮನೆಗೆ ಬಂದಿದ್ದರು. ಅಲ್ಲಿ ನಾವು ಸ್ವಲ್ಪ ಅಭ್ಯಾಸ ನಡೆಸಿದ್ದೆವು. ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುವೆ. ನಾನು ಗಾಯಗೊಂಡಾಗ ಚಿರಾಗ್ ನನ್ನೊಂದಿಗಿದ್ದರು. ಚಿರಾಗ್ ಹೆತ್ತವರು ಹಾಗೂ ನಮ್ಮ ಕೋಚ್ ನನ್ನ ತವರುಪಟ್ಟಣ ಅಮಲಾಪುರಂಗೆ ಬಂದಿದ್ದರು’’ ಎಂದು ಸಾತ್ವಿಕ್ ಹೇಳಿದ್ದಾರೆ.
7ನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಅಂತಿಮ-16ರ ಸುತ್ತಿನಲ್ಲಿ ಚೀನಾದ ಹಾವೊ ನ್ಯಾನ್ ಕ್ಸಿ ಹಾಗೂ ವೀ ಹಾನ್ ಝೆಂಗ್ರನ್ನು ಎದುರಿಸಲಿದ್ದಾರೆ.
ಭಾರತೀಯರು ಭಾಗವಹಿಸಲಿರುವ ಇನ್ನುಳಿದ ಪಂದ್ಯಗಳಲ್ಲಿ ಲಕ್ಷ್ಯ ಸೇನ್ ಅವರು ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ, ಮಾಳವಿಕಾ ಬನ್ಸೊಡ್ ಅವರು ಜಪಾನಿನ 3ನೇ ಶ್ರೇಯಾಂಕದ, ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಮಾಳವಿಕಾ ಈಹಿಂದೆ ಪ್ರತಿಷ್ಠಿತ ಪಂದ್ಯಾವಳಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಸಿಂಗಾಪುರದ ಯೆವೊ ಜಿಯಾ ಮಿನ್ರನ್ನು ಮಣಿಸಿ ಶಾಕ್ ನೀಡಿದ್ದರು.
ಈ ಟೂರ್ನಿಯಲ್ಲಿ ಸತತ ಎರಡು ಬಾರಿ ಸೆಮಿ ಫೈನಲ್ ತಲುಪಿದ್ದ ವಿಶ್ವದ 9ನೇ ಶ್ರೇಯಾಂಕದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್, ಎಂಟನೇ ಶ್ರೇಯಾಂಕದ ಕೊರಿಯಾದ ಜೋಡಿ ಹೈ ಜೆಯೋಂಗ್ ಕಿಮ್ ಹಾಗೂ ಹೀ ಯೊಂಗ್ ಕಾಂಗ್ ಅವರನ್ನು ಎದುರಿಸಲಿದ್ದಾರೆ.
ರೋಹನ್ ಕಪೂರ್ ಹಾಗೂ ಋತ್ವಿಕಾ ಶಿವಾನಿ ಅವರು ಚೀನಾದ 5ನೇ ಶ್ರೇಯಾಂಕದ ಜೋಡಿ ಯಾನ್ ಝಿ ಫೆಂಗ್ ಹಾಗೂ ಯಾ ಕ್ಸಿನ್ ವೀ ಅವರನ್ನು ಎದುರಿಸಲಿದ್ದಾರೆ.