ಥಾಯ್ಲೆಂಡ್ ಓಪನ್ : ಸಾತ್ವಿಕ್-ಚಿರಾಗ್ ಜೋಡಿಗೆ ಬೆಳ್ಳಿ

Photo : X/BAIMedia
ಬ್ಯಾಂಕಾಕ್, ಮೇ 17: ಬ್ಯಾಂಕಾಕ್ನಲ್ಲಿ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಪರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದಿದೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ, ಅಗ್ರ ಶ್ರೇಯಾಂಕದ ಭಾರತೀಯ ಜೋಡಿಯು ಇಂಡೋನೇಶ್ಯದ ಲಿಯೋ ರೋಲಿ ಕನಾರ್ಂಡೋ ಮತ್ತು ಡೇನಿಯಲ್ ಮಾರ್ಟಿನ್ ಜೋಡಿ ವಿರುದ್ಧ 12-21, 23-25 ಗೇಮ್ಗಳಿಂದ ಪರಾಜಯಗೊಂಡಿತು.
ಕಳೆದ ಎರಡು ವರ್ಷಗಳಲ್ಲಿ ಬೇರೆ ಬೇರೆ ಪಾಲುದಾರರೊಂದಿಗೆ ಆಡಿ, ಈಗ ಮತ್ತೆ ಒಂದಾಗಿರುವ ಕನಾರ್ಂಡೋ-ಮಾರ್ಟಿನ್ ಜೋಡಿಯು, ಭಾರತೀಯ ಜೋಡಿಯ ವಿರುದ್ಧ ಈವರೆಗೆ ಐದು ಬಾರಿ ಮುಖಾಮುಖಿಯಾಗಿದ್ದು ಇದೇ ಮೊದಲ ಬಾರಿಗೆ ಜಯ ದಾಖಲಿಸಿದೆ.
2019 ಮತ್ತು 2024ರಲ್ಲಿ ಚಾಂಪಿಯನ್ ಆಗಿದ್ದ ಸಾತ್ವಿಕ್ ಮತ್ತು ಚಿರಾಗ್, ತಮ್ಮ ಮೂರನೇ ಥಾಯ್ಲೆಂಡ್ ಓಪನ್ ಪ್ರಶಸ್ತಿಯ ಬೇಟೆಯಲ್ಲಿದ್ದರು.
ತೀವ್ರ ಹಣಹಣಿಯಿಂದ ಕೂಡಿದ ಪಂದ್ಯದ ಮೊದಲ ಗೇಮನ್ನು ಇಂಡೋನೇಶ್ಯದ ಜೋಡಿ ಸುಲಭವಾಗಿ ಗೆದ್ದಿತು. ಆದರೆ, ಎರಡನೇ ಗೇಮ್ ಜಿದ್ದಾಜಿದ್ದಿನಿಂದ ಕೂಡಿತು.
ಎರಡನೇ ಗೇಮ್ನಲ್ಲಿ, ಮಾರ್ಟಿನ್ ತನ್ನ ಬಲಶಾಲಿ ಹೊಡೆತಗಳ ಮೂಲಕ ಭಾರತೀಯ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿದರು. ವಿರಾಮದ ವೇಳೆಗೆ ಅಂಕ 9-9ರಲ್ಲಿ ಸಮಬಲದಲ್ಲಿತ್ತು.
ವಿರಾಮದ ನಂತರ ಪಂದ್ಯವು ಯಾರು ಮೊದಲು ಎಡವುತ್ತಾರೆ ಎಂಬಂತಹ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಚಿರಾಗ್ ಅವರ ಫ್ಲಿಕ್ ಸರ್ವ್ಗೆ ಎದುರಾಳಿಗಳು ಭರ್ಜರಿ ಸ್ಮ್ಯಾಶ್ ಮೂಲಕ ಉತ್ತರಿಸಿದ್ದರಿಂದ ಇಂಡೋನೇಶ್ಯ ಮತ್ತೆ 11-11 ರ ಸಮಬಲ ಸಾಧಿಸಿತು. ಅಲ್ಲಿಂದ ಮುಂದೆ ಉಭಯ ಜೋಡಿಗಳ ನಡುವೆ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಸರ್ವಿಸ್ ಸಂದರ್ಭಗಳಲ್ಲಿ ಮುನ್ನಡೆಯು ಕೈಬದಲಾಗುತ್ತಲೇ ಇತ್ತು. ಸ್ಕೋರ್ 14-14 ರಿಂದ 19-19 ರವರೆಗೆ ಸಮಬಲದಲ್ಲೇ ಸಾಗಿತು. ಅಂತಿಮವಾಗಿ ಎರಡನೇ ಗೇಮನ್ನು 25-23 ಅಂಕಗಳ ಅಂತರದಿಂದ ಗೆಲ್ಲುವಲ್ಲಿ ಇಂಡೋನೇಶ್ಯ ಆಟಗಾರರು ಗೆದ್ದರು.






