ಥಾಯ್ಲೆಂಡ್ ಓಪನ್ | ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್

Photo : olympics.com
ಬ್ಯಾಂಕಾಕ್ : ಭಾರತದ ಸ್ಟಾರ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ ಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ಗಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.3ನೇ ಜೋಡಿ ಸಾತ್ವಿಕ್ ಹಾಗೂ ಚಿರಾಗ್ 29ನೇ ರ್ಯಾಂಕಿನ ಚೀನಾದ ಚೆನ್ ಬೊ ಯಾಂಗ್ ಹಾಗೂ ಲಿಯು ಯಿ ಅವರನ್ನು 21-15, 21-15 ನೇರ ಗೇಮ್ಗಳ ಅಂತರದಿಂದ ಸೋಲಿಸಿ 9ನೇ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದರು.
ಬ್ಯಾಂಕಾಕ್ ನಮ್ಮ ಪಾಲಿಗೆ ಯಾವಾಗಲೂ ವಿಶೇಷವಾದುದು. ನಾವು ಇಲ್ಲಿಯೇ 2019ರಲ್ಲಿ ನಮ್ಮ ಮೊದಲ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದಿದ್ದೆವು. ಥಾಮಸ್ ಕಪ್ನ್ನೂ ಇಲ್ಲಿಯೇ ಗೆದ್ದಿದ್ದೇವೆ. ಹೀಗಾಗಿ ಇದು ನಮ್ಮ ಪಾಲಿಗೆ ವಿಶೇಷ ಸ್ಥಳ. ಇಲ್ಲಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಗೆಲುವಿನ ನಂತರ ಚಿರಾಗ್ ಹೇಳಿದ್ದಾರೆ.
ಇತ್ತೀಚೆಗೆ ಕೆಲವು ಟೂರ್ನಮೆಂಟ್ ಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಸಾತ್ವಿಕ್ ಹಾಗೂ ಚಿರಾಗ್ಗೆ ಈ ಗೆಲುವು ನಿರ್ಣಾಯಕ ಮೇಲುಗೈ ಒದಗಿಸಿದೆ. ಸಾತ್ವಿಕ್ ಹಾಗೂ ಚಿರಾಗ್ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ 2ನೇ ಸುತ್ತಿನಲ್ಲಿ ಸೋತಿದ್ದರು. ಸಾತ್ವಿಕ್ ಗಾಯಗೊಂಡ ಕಾರಣ ಏಶ್ಯ ಚಾಂಪಿಯನ್ ಶಿಪ್ ನಿಂದ ವಂಚಿತರಾಗಿದ್ದರು. ಥಾಮಸ್ ಕಪ್ ಅಭಿಯಾನದಲ್ಲಿ ಅಗ್ರ ಜೋಡಿಯ ವಿರುದ್ಧ ತೀವ್ರ ಪೈಪೋಟಿ ನೀಡಿ ಸೋತಿದ್ದರು.
ಒಂದೂ ಗೇಮ್ನ್ನು ಸೋಲದೆ ಥಾಯ್ಲೆಂಡ್ ಓಪನ್ ಫೈನಲ್ ಗೆ ಪ್ರವೇಶಿಸಿದ್ದ ಸಾತ್ವಿಕ್ ಹಾಗೂ ಚಿರಾಗ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದರು. ಫೈನಲ್ ಪಂದ್ಯದಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಚೆನ್ ಹಾಗೂ ಲಿಯು ವಿರುದ್ಧ ಭಾರತದ ಜೋಡಿ ಪ್ರಬಲ ಹೋರಾಟ ನೀಡಿದರು. ತೀವ್ರ ಒತ್ತಡ ಹೇರುವಲ್ಲಿ ಸಫಲರಾದರು.
ಗೆಲುವಿನ ಸಂಭ್ರಮದಲ್ಲಿ ಸಾತ್ವಿಕ್ ತನ್ನ ರಾಕೆಟ್ನೊಂದಿಗೆ ಡ್ಯಾನ್ಸ್ ಮಾಡಿದರೆ, ಚಿರಾಗ್ ತನ್ನ ಶರ್ಟನ್ನು ಪ್ರೇಕ್ಷಕರತ್ತ ಎಸೆದರು. ಇಬ್ಬರು ಆಟಗಾರರು ಪ್ರಮುಖ ಪ್ರಶಸ್ತಿಯನ್ನು ಜಯಿಸಿ ನಿಟ್ಟುಸಿರುಬಿಟ್ಟರು.







