ಸ್ಪ್ಯಾನಿಶ್ ಸೂಪರ್ ಕಪ್ ಎತ್ತಿದ ಬಾರ್ಸಿಲೋನ

Photo Credit : AP \ PTI
ಜಿದ್ದಾ, ಜ. 12: ಸೌದಿ ಅರೇಬಿಯಾದಲ್ಲಿ ರವಿವಾರ ನಡೆದ ಸ್ಪ್ಯಾನಿಶ್ ಸೂಪರ್ ಕಪ್ ಫೈನಲ್ ನಲ್ಲಿ ಬಾರ್ಸಿಲೋನ ತಂಡವು ರಿಯಲ್ ಮ್ಯಾಡ್ರಿಡ್ ತಂಡವನ್ನು 3–2 ಗೋಲುಗಳಿಂದ ಸೋಲಿಸಿದೆ. ಬಾರ್ಸಿಲೋನದ ಪರವಾಗಿ ರಫಿನಾ ಎರಡು ಗೋಲುಗಳನ್ನು ಬಾರಿಸಿದರು.
ರಫಿನಾ 73ನೇ ನಿಮಿಷದಲ್ಲಿ ವಿಜಯೀ ಗೋಲನ್ನು ಬಾರಿಸಿದರು. ಈ ಗೋಲು ಅನಿಶ್ಚಿತತೆಯಿಂದ ಕೂಡಿತ್ತು. ಚೆಂಡನ್ನು ಬಾರಿಸುವ ವೇಳೆ ಅವರು ಜಾರಿದರು. ಚೆಂಡು ಎದುರಾಳಿ ಮ್ಯಾಡ್ರಿಡ್ ರಕ್ಷಣಾ ಆಟಗಾರ ರಾವುಲ್ ಅಸೆನ್ಶಿಯೊ ಅವರ ದೇಹಕ್ಕೆ ತಾಕಿ ದಿಕ್ಕು ಬದಲಿಸಿಕೊಂಡು ಗೋಲ್ ಕೀಪರ್ ತಿಬೋಟ್ ಕೋರ್ಟೋಯಿಸ್ ಅವರನ್ನು ವಂಚಿಸಿ ಗೋಲುಪೆಟ್ಟಿಗೆಯನ್ನು ಸೇರಿತು.
‘‘ನಮ್ಮಲ್ಲಿ ಇದ್ದದ್ದನ್ನೆಲ್ಲ ನಾವು ಈ ಪಂದ್ಯಕ್ಕೆ ಕೊಟ್ಟೆವು,’’ ಎಂದು ರಫಿನಾ ಹೇಳಿದರು. ‘‘ಪಂದ್ಯದ ಕೊನೆಯಲ್ಲಿ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೆ. ನಾವು ಈ ರೀತಿಯಲ್ಲಿ ಗೆಲ್ಲಬೇಕಾಗಿತ್ತು,’’ ಎಂದು ಅವರು ನುಡಿದರು.
ಇದು ಬಾರ್ಸಿಲೋನದ 16ನೇ ಸೂಪರ್ ಕಪ್ ಪ್ರಶಸ್ತಿಯಾಗಿದೆ. ಇದು ಇತರೆ ಎಲ್ಲಾ ಕ್ಲಬ್ಗಳಿಗಿಂತ ಶ್ರೇಷ್ಠವಾಗಿದೆ. ರಿಯಲ್ ಮ್ಯಾಡ್ರಿಡ್ 13 ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮಂಡಿ ಸಮಸ್ಯೆಯಿಂದ ಬಳಲುತ್ತಿದ್ದ ಕಿಲಿಯಾನ್ ಎಂಬಾಪೆ ಪಂದ್ಯಾವಳಿಯ ಸೆಮಿಫೈನಲ್ಗಳಿಂದ ಹೊರಗುಳಿದಿದ್ದರು. ಫೈನಲ್ನಲ್ಲಿ ಅವರು 76ನೇ ನಿಮಿಷದಲ್ಲಿ ಕಣ ಪ್ರವೇಶಿಸಿದರು. ಆದರೆ, ಮ್ಯಾಡ್ರಿಡ್ ಗೋಲನ್ನು ಸರಿಗಟ್ಟಲು ಅವರಿಗೆ ಸಾಧ್ಯವಾಗಲಿಲ್ಲ.
ಬಾರ್ಸಿಲೋನಾದ ಪರವಾಗಿ ರಾಬರ್ಟ್ ಲೆವಂಡೊವ್ಸ್ಕಿ ಕೂಡ ಗೋಲು ಬಾರಿಸಿದರು.
ಮ್ಯಾಡ್ರಿಡ್ ಪರವಾಗಿ ಗೋಲುಗಳನ್ನು ಬಾರಿಸಿದವರು ವಿನಿಸಿಯಸ್ ಜೂನಿಯರ್ ಹಾಗೂ ಗೊನ್ಸಾಲೊ ಗಾರ್ಸಿಯಾ.







