FIFA 2026 | ಬಲಿಷ್ಠ ಉರುಗ್ವೆ ತಂಡದ ವಿರುದ್ಧ ಡ್ರಾ ಸಾಧಿಸಿದ ಸೌದಿ ಅರೇಬಿಯಾ

Photo credit: X/@FIFAWorldCup
ಮಯಾಮಿ: ಗೋಲ್ಕೀಪರ್ ಮುಹಮ್ಮದ್ ಅಲ್-ಒವೈಸ್ ಅವರ ಅದ್ಭುತ ಸೇವ್ ಗಳ ಮೂಲಕ ಸೌದಿ ಅರೇಬಿಯಾ ತಂಡವು ಎರಡು ಬಾರಿಯ ವಿಶ್ವಕಪ್ ವಿಜೇತ ಬಲಿಷ್ಠ ಉರುಗ್ವೆ ತಂಡದ ವಿರುದ್ಧದ ಪಂದ್ಯವನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡಿದೆ.
ಈ ಮೂಲಕ ಗ್ರೂಪ್ ಎಚ್ ನಲ್ಲಿ ಉಭಯ ತಂಡಗಳಿಗೂ ತಲಾ ಒಂದು ಅಂಕ ದೊರೆಯಿತು.
ಪಂದ್ಯದ ಆರಂಭದಿಂದಲೇ ಸೌದಿ ಅರೇಬಿಯಾ ಗೋಲ್ಕೀಪರ್ ಮುಹಮ್ಮದ್ ಅಲ್-ಒವೈಸ್ ಉರುಗ್ವೆ ತಂಡದ ಹಲವು ಗೋಲು ಗಳಿಸುವ ಪ್ರಯತ್ನವನ್ನು ತಡೆದು ಒತ್ತಡ ಹೇರಿದರು.
ಮೊದಲಾರ್ಧದ ಕೊನೆಯ ಭಾಗದಲ್ಲಿ ಕಾರ್ನರ್ ಕಿಕ್ ಮೂಲಕ ಮುಹಮ್ಮದ್ ಕನ್ನೊ ಅವರ ಹೆಡರ್ ಅನ್ನು ಉರುಗ್ವೆಯ ಅನುಭವಿ ಗೋಲ್ಕೀಪರ್ ಫೆರ್ನಾಂಡೋ ಮುಸ್ಲೆರಾ ತಡೆದರು. ಆದರೆ ವಾಪಾಸು ಬಂದ ಚೆಂಡನ್ನು ಅಬ್ದುಲ್ಲಾ ಅಲ್-ಅಮ್ರಿ ಗೋಲ್ ಪೋಸ್ಟ್ಗೆ ತಳ್ಳುವ ಮೂಲಕ ತಂಡಕ್ಕೆ ಸೌದಿ ಅರೇಬಿಯಾ ಮುನ್ನಡೆ ತಂದುಕೊಟ್ಟರು.
ಆದರೆ, ದ್ವಿತೀಯಾರ್ಧದಲ್ಲಿ ಉರುಗ್ವೆ ತಂಡವು ಉತ್ತಮ ಪ್ರದರ್ಶನ ನೀಡಿತು.
ಅಂತಿಮವಾಗಿ, 80ನೇ ನಿಮಿಷದಲ್ಲಿ ಫೆಡೆರಿಕೊ ವಿನಾಸ್ ಅವರ ಹೆಡರ್ ಅನ್ನು ಗೋಲ್ ಕೀಪರ್ ತಡೆಯಲು ಪ್ರಯತ್ನಿಸುವಾಗ ಮ್ಯಾಕ್ಸಿ ಅರೌಜೊ ಸಮಯೋಚಿತವಾಗಿ ಗೋಲಾಗಿ ಪರಿವರ್ತಿಸಿದರು.
ಇದರ ಮೂಲಕ ಉರುಗ್ವೆ ತಂಡವು ಸಮಬಲದ ಸಾಧಿಸಿ ಸೋಲಿನಿಂದ ಪಾರಾಯಿತು.
ಉರುಗ್ವೆ ಯು 10 ಬಾರಿ ನೇರ ಗುರಿ ಮತ್ತು 15 ಬಾರಿ ಪೆನಾಲ್ಟಿ ಚೌಕದ ಒಳಗೆ ಗುರಿಯಾಗಿಸಿಕೊಂಡು , ಒಟ್ಟು 27 ಬಾರಿ ಗೋಲು ಪ್ರಯತ್ನ ನಡೆಸಿತು .
ಒಂದು ಅಂಕ ಗಳಿಸಿದ ಸೌದಿ ಅರೇಬಿಯಾ ಮುಂದಿನ ಪಂದ್ಯದಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದ್ದು, ಜಯಗಳಿಸಿದರೆ ನಾಕೌಟ್ ಪ್ರವೇಶಿಸುವ ಸಾಧ್ಯತೆ ಇದೆ.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಕೇಪ್ ವರ್ಡೆ ತಂಡವು ಬಲಿಷ್ಠ ಸ್ಪೇನ್ ತಂಡದ ವಿರುದ್ಧ ಡ್ರಾ ಸಾಧಿಸಿ ಒಂದು ಅಂಕ ಗಳಿಸಿದೆ.
ಗುಂಪಿನ ನಾಲ್ಕೂ ತಂಡಗಳು ತಲಾ 1 ಅಂಕದ ಮೂಲಕ ನಾಕೌಟ್ ಪ್ರವೇಶವನ್ನು ಜೀವಂತವಗಿರಿಸಿದೆ.






