ಒಲಿಂಪಿಕ್ಸ್ ಕ್ವಾಲಿಫೈಯರ್ಸ್: ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಬೆಂಗಳೂರು, ಡಿ.30: ರಾಂಚಿಯಲ್ಲಿ ಜನವರಿ 13ರಿಂದ 19ರ ತನಕ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಗೆ ಹಾಕಿ ಇಂಡಿಯಾ ಶನಿವಾರ 18 ಸದಸ್ಯರನ್ನು ಒಳಗೊಂಡ ಭಾರತೀಯ ಮಹಿಳೆಯರ ಹಾಕಿ ತಂಡವನ್ನು ಪ್ರಕಟಿಸಿದೆ. ಹಿರಿಯ ಗೋಲ್ ಕೀಪರ್ ಸವಿತಾ ಪುನಿಯಾ ತಂಡದ ನಾಯಕಿಯಾಗಿ ಮುಂದುವರಿಯಲಿದ್ದು, ವಂದನಾ ಕಟಾರಿಯ ಉಪ ನಾಯಕಿಯಾಗಿದ್ದಾರೆ.
ರಾಂಚಿಯಲ್ಲಿ ಹಾಕಿ ಕಣಕ್ಕಿಳಿಯಲಿರುವ ಭಾರತವು ಸ್ಪರ್ಧಾವಳಿಯಲ್ಲಿ ಅಗ್ರ-3 ತಂಡಗಳಲ್ಲಿ ಒಂದೆನಿಸಿ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆಯುವತ್ತ ಚಿತ್ತಹರಿಸಿದೆ.
ನಮ್ಮ ಪ್ಯಾರಿಸ್ ಒಲಿಂಪಿಕ್ಸ್ ಪಯಣಕ್ಕೆ ರಾಂಚಿಯಲ್ಲಿ ನಡೆಯುವ ಎಫ್ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಪ್ರಮುಖ ಟೂರ್ನಮೆಂಟ್ ಆಗಿದೆ. ನಾವು ನಿರೀಕ್ಷೆಗಳಿಗೆ ತಕ್ಕಂತೆ ಆಡುವುದು ಅತ್ಯಗತ್ಯ. ತಂಡದಲ್ಲಿರುವ ಎಲ್ಲ ಆಟಗಾರ್ತಿಯರು ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಭಾರತೀಯ ಮಹಿಳಾ ತಂಡದ ಮುಖ್ಯ ಕೋಚ್ ಜಾನ್ನೆಕ್ ಸ್ಕೋಪ್ಮನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಾವು ಎಲ್ಲ ವಿಭಾಗಗಳಲ್ಲಿ ಅಪಾರ ಕೌಶಲ್ಯ ಹಾಗೂ ಅನುಭವದೊಂದಿಗೆ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಸವಿತಾ ಹಾಗೂ ವಂದನಾ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬಾರಿ ಅಧಿಕ ಒತ್ತಡದ ಸಂದರ್ಭಗಳನ್ನು ಎದುರಿಸಿದ್ದಾರೆ. ನಾಯಕಿ ಹಾಗೂ ಉಪ ನಾಯಕಿಯಾಗಿ ತಂಡದ ಉಳಿದ ಸದಸ್ಯರಿಗೆ ಮಾರ್ಗದರ್ಶನ ನೀಡಲು ಸಜ್ಜುಗೊಂಡಿದ್ದಾರೆ ಎಂದು ಸ್ಕೋಪ್ಮನ್ ಹೇಳದ್ದಾರೆ.
ಸವಿತಾ ಇತ್ತೀಚೆಗೆ ಸತತ ಮೂರನೇ ಬಾರಿ ವರ್ಷದ ಎಫ್ಐಎಚ್ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದರು. ಹಿರಿಯ ಫಾರ್ವರ್ಡ್ ವಂದನಾ ಭಾರತದ ಪರ 300 ಪಂದ್ಯಗಳನ್ನು ಆಡಿದ ಮೊತ್ತ ಮೊದಲ ಆಟಗಾರ್ತಿಯಾಗಿದ್ದಾರೆ.
ಭಾರತವು ನ್ಯೂಝಿಲ್ಯಾಂಡ್, ಇಟಲಿ ಹಾಗೂ ಅಮೆರಿಕ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜರ್ಮನಿ, ಜಪಾನ್, ಚಿಲಿ ಹಾಗೂ ಝೆಕ್ ಗಣರಾಜ್ಯ ಎ ಗುಂಪಿನಲ್ಲಿವೆ.
ಭಾರತ ತಂಡವು ಅಮೆರಿಕ ವಿರುದ್ಧ ಜನವರಿ 13ರಂದು ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ಜ.14ರಂದು ನ್ಯೂಝಿಲ್ಯಾಂಡ್ ವಿರುದ್ಧ ಆಡಲಿದೆ. ಜನವರಿ 16ರಂದು ಬಿ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಇಟಲಿ ತಂಡವನ್ನು ಎದುರಿಸಲಿದೆ.
ಭಾರತದ ಮಹಿಳಾ ಹಾಕಿ ತಂಡ
ಗೋಲ್ಕೀಪರ್ಗಳು: ಸವಿತಾ ಪುನಿಯಾ(ನಾಯಕಿ), ಬಿಚು ದೇವಿ
ಡಿಫೆಂಡರ್ಗಳು: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ
ಮಿಡ್ ಫೀಲ್ಡರ್ಗಳು: ನಿಶಾ, ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ನವನೀತ್ ಕೌರ್, ಸಲಿಮಾ ಟೇಟೆ, ಸೋನಿಕಾ, ಜ್ಯೋತಿ, ಬ್ಯೂಟಿ ಡಂಗ್ಡಂಗ್
ಫಾರ್ವರ್ಡ್ಗಳು: ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯ.







