ಎರಡನೇ ಟಿ-20| ವೆಸ್ಟ್ಇಂಡೀಸ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಜಯ

Photo Credit ; X
ದುಬೈ, ಜ.22: ಸ್ಪಿನ್ನರ್ ಮುಜೀಬ್ವುರ್ರೆಹ್ಮಾನ್ ಕಬಳಿಸಿದ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು 39 ರನ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ಗೆ ತಯಾರಾಗಿದೆ.
ವೆಸ್ಟ್ಇಂಡೀಸ್ ತಂಡವು ಮೊದಲ ಪಂದ್ಯವನ್ನು 38 ರನ್ಗಳ ಅಂತರದಿಂದ ಸೋತಿತ್ತು.
ಎರಡನೇ ಪಂದ್ಯದಲ್ಲಿ ಗೆಲ್ಲಲು 190 ರನ್ ಗುರಿ ಪಡೆದಿದ್ದ ವಿಂಡೀಸ್ ತಂಡವು 18.5 ಓವರ್ಗಳಲ್ಲಿ 150 ರನ್ಗೆ ಆಲೌಟಾಯಿತು. ನಾಯಕ ಬ್ರೆಂಡನ್ ಕಿಂಗ್(50 ರನ್, 41 ಎಸೆತ, 2 ಬೌಂಡರಿ, 4 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಮುಜೀಬ್ ಎರಡು ವಿಭಿನ್ನ ಓವರ್ಗಳಲ್ಲಿ ಐದು ಎಸೆತಗಳಲ್ಲಿ 21 ರನ್ಗೆ ನಾಲ್ಕು ವಿಕೆಟ್ಗಳನ್ನು ಪಡೆದರು.
8ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಲೂವಿಸ್ ಹಾಗೂ ಚಾರ್ಲ್ಸ್ ವಿಕೆಟನ್ನು ಪಡೆದ ಮುಜೀಬ್ 16ನೇ ಓವರ್ನ ಮೊದಲ ಎಸೆತದಲ್ಲಿ ಬ್ರೆಂಡನ್ ಕಿಂಗ್(50 ರನ್, 41 ಎಸೆತ)ವಿಕೆಟನ್ನು ಉರುಳಿಸಿ ಹ್ಯಾಟ್ರಿಕ್ ಪೂರೈಸಿದರು.
ರಶೀದ್ ಖಾನ್ ಹಾಗೂ ಕರೀಮ್ ಜನತ್ ನಂತರ ಟಿ-20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅಫ್ಘಾನಿಸ್ತಾನದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಟಾಸ್ ಜಯಿಸಿದ ವೆಸ್ಟ್ಇಂಡೀಸ್ ತಂಡ ಅಫ್ಘಾನಿಸ್ತಾನ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಸತತ ಮೂರನೇ ಟಿ-20 ಅರ್ಧಶತಕ ಗಳಿಸಿದ ಡಾರ್ವಿಶ್ ರಸೂಲಿ(68 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ಸೆದಿಕುಲ್ಲಾ ಅಟಲ್(53 ರನ್, 42 ಎಸೆತ, 2 ಬೌಂಡರಿ, 3 ಸಿಕ್ಸರ್) ಕೊಡುಗೆಯ ನೆರವಿನಿಂದ ಅಫ್ಘಾನಿಸ್ತಾನ ತಂಡ ನಾಲ್ಕು ವಿಕೆಟ್ಗಳ ನಷ್ಟಕ್ಕೆ 189 ರನ್ ಗಳಿಸಿದೆ.
ವೆಸ್ಟ್ಇಂಡೀಸ್ ತಂಡವು 8 ಓವರ್ಗಳಲ್ಲಿ 38 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಮುಜೀಬ್ ಅವರು ಎವಿನ್ ಲೂವಿಸ್(13 ರನ್) ಹಾಗೂ ಜಾನ್ಸನ್ ಚಾರ್ಲ್ಸ್ಗೆ(0)ಸತತ ಎಸೆತಗಳಲ್ಲಿ ಪೆವಿಲಿಯನ್ ಹಾದಿ ತೋರಿಸಿದರು.
17 ಎಸೆತಗಳಲ್ಲಿ 46 ರನ್ ಗಳಿಸಿದ ಶಿಮ್ರೊನ್ ಹೆಟ್ಮೆಯರ್ ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಫಝಲ್ಹಕ್ ಫಾರೂಕಿಗೆ(2-28)ವಿಕೆಟ್ ಒಪ್ಪಿಸಿದರು. ವೇಗದ ಬೌಲರ್ ಅಝ್ಮತುಲ್ಲಾ ಉಮರ್ಝೈ 20 ರನ್ಗೆ ಎರಡು ವಿಕೆಟ್ಗಳನ್ನು ಪಡೆದರು. 11ನೇ ಕ್ರಮಾಂಕದ ಬ್ಯಾಟರ್ ರಾಮೊನ್ ಸಿಮ್ಮಂಡ್ಸ್ರನ್ನು (1 ರನ್) ಔಟ್ ಮಾಡಿದ ಫಾರೂಕಿ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಅಫ್ಘಾನಿಸ್ತಾನ ತಂಡವು ಸರಣಿ ಗೆಲ್ಲುವಲ್ಲಿ ನೆರವಾದರು.
ಅಫ್ಘಾನಿಸ್ತಾನದ ಆರಂಭಿಕ ಜೋಡಿ ರಹಮಾನುಲ್ಲಾ ಗುರ್ಬಾಝ್(1ರನ್)ಹಾಗೂ ಇಬ್ರಾಹೀಂ ಝದ್ರಾನ್(22 ರನ್)ಪವರ್ಪ್ಲೇ ಒಳಗೆ ಔಟಾದರು. ರಸೂಲಿ ಹಾಗೂ ಅಟಲ್ ಮೂರನೇ ವಿಕೆಟ್ಗೆ 115 ರನ್ ಜೊತೆಯಾಟದಿಂದ ವೇಗ ಹಾಗೂ ಸ್ಪಿನ್ ಬೌಲರ್ಗಳ ಮೇಲೆ ಸವಾರಿ ಮಾಡಿದರು.
ಉಮರ್ಝೈ 13 ಎಸೆತಗಳಲ್ಲಿ ಔಟಾಗದೆ 26 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ 19 ರನ್ ಸಹಿತ ಒಟ್ಟು 54 ರನ್ ನೀಡಿದ ಸ್ಪಿನ್ನರ್ ಗುಡಕೇಶ್ ಮೊಟೀ ದುಬಾರಿ ಬೌಲರ್ ಎನಿಸಿಕೊಂಡರು.
ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ಸತತ ಮೂರನೇ ಬಾರಿ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ. ಗುರುವಾರ ಉಭಯ ತಂಡಗಳು ಮೂರನೇ ಪಂದ್ಯವನ್ನಾಡಲಿವೆ.







