ಎರಡನೇ ಟಿ20 | ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ

Photo credit:@Sportskeeda
ಮೆಲ್ಬರ್ನ್, ಅ.31: ಮೆಲ್ಬರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡವು, ಭಾರತ ನೀಡಿದ್ದ 126 ರನ್ಗಳ ಅಲ್ಪ ಗುರಿಯನ್ನು ಕೇವಲ 13.2 ಓವರ್ಗಳಲ್ಲಿ ಮುಟ್ಟುವ ಮೂಲಕ ಸುಲಭ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.
ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ತಂಡಕ್ಕೆ ಆರಂಭಿಕ ಟ್ರಾವಿಸ್ ಹೆಡ್ ಮತ್ತು ಮಿಷೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಇಬ್ಬರೂ ಸೇರಿ 51 ರನ್ಗಳ ಜೊತೆಯಾಟ ನಡೆಸಿದರು. ಟ್ರಾವಿಸ್ ಹೆಡ್ 28 ರನ್ಗಾಗಿ ಔಟ್ ಆದರೂ, ಮಿಷೆಲ್ ಮಾರ್ಷ್ ಸಿಡಿಸಿದ ಸ್ಫೋಟಕ 46 ರನ್ ಗಳ ಇನ್ನಿಂಗ್ಸ್ ತಂಡಕ್ಕೆ ಜಯದ ದಾರಿ ತೋರಿಸಿತು. ಇನ್ನೂ 6.4 ಓವರ್ಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯ ಗುರಿ ಮುಟ್ಟಿತು.
ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತ ತಂಡವು ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಅಭಿಷೇಕ್ ಶರ್ಮಾ ಮಾತ್ರ 68 ರನ್(8 ಬೌಂಡರಿ, 2 ಸಿಕ್ಸರ್)ಗಳನ್ನು ಸಿಡಿಸಿದರು. ಆದರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲರಾದರು. ಶುಭಮನ್ ಗಿಲ್ (5), ಸಂಜು ಸ್ಯಾಮ್ಸನ್ (2), ನಾಯಕ ಸೂರ್ಯಕುಮಾರ್ ಯಾದವ್ (1), ತಿಲಕ್ ವರ್ಮಾ (0) ಹಾಗೂ ಅಕ್ಸರ್ ಪಟೇಲ್ (7) ಶೀಘ್ರವೇ ಪೆವಿಲಿಯನ್ಗೆ ಮರಳಿದರು.
ಕೆಳ ಕ್ರಮಾಂಕದಲ್ಲಿ ಆಟವಾಡಿದ ಹರ್ಷಿತ್ ರಾಣಾ (35) ರನ್ಗಳಿಂದ ಭಾರತ ತಂಡವು ನೂರರ ಗಡಿ ದಾಟಲು ನೆರವಾಯಿತು.
ಆಸ್ಟ್ರೇಲಿಯ ಪರ ಜೋಶ್ ಹೇಝಲ್ವುಡ್ 3 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಕ್ರಮಾಂಕದ ಹಳಿ ತಪ್ಪಿಸಿದರು. ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ನಾಥನ್ ಎಲ್ಲಿಸ್ ತಲಾ 2 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋಯಿನಿಸ್ ಒಂದು ವಿಕೆಟ್ ಪಡೆದರು.







