ಎರಡನೇ ಟಿ20 : ದಕ್ಷಿಣ ಆಪ್ರಿಕಾಕ್ಕೆ ಭಾರತದ ವಿರುದ್ಧ 5 ವಿಕೆಟ್ಗಳ ಜಯ

Photo : x/@Its_Nashayiii
ಗೈ ಬರ್ಹಾ : ಇಲ್ಲಿನ ಸೇಂಟ್ ಜಾರ್ಜ್ ಸ್ಟೇಡಿಯಮ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕ 5 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡವು 19.3 ಓವರ್ ಗಳಲ್ಲಿ 180ರನ್ನು ಗಳಿಸಿತು. ಮಳೆಯ ಕಾರಣದಿಂದಾಗಿ ಕೊನೆಯ ಮೂರು ಎಸೆತಗಳನ್ನು ನಿಲ್ಲಿಸಿ, ದಕ್ಷಿಣ ಆಫ್ರಿಕ ತಂಡಕ್ಕೆ ಡಿಎಲ್ಎಸ್ (ಡಕ್ವರ್ತ್ ಲೂಯಿಸ್) ನಿಯಮದಂತೆ 15 ಓವರ್ ಗಳಿಗೆ 152 ರನ್ ಗಳ ಗುರಿ ನೀಡಲಾಯಿತು.
ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಪ್ರಿಕ ತಂಡವು ಆರಂಭಿಕ ಬ್ಯಾಟರ್ಗಳಾದ ಮ್ಯಾಥ್ಯೂ ಬ್ರೀಟ್ಝ್ಕೆ ಮತ್ತು ರೀಝಾ ಹೆಂಡ್ರಿಕ್ಸ್ ಉತ್ತಮ ಪ್ರದರ್ಶನವನ್ನು ನೀಡಿದರು. ಬ್ರೀಟ್ಝ್ಕೆ 16 ಗಳಿಸಿ ರನ್ ಔಟ್ ಆದ ನಂತರ ರೀಝಾ ಹೆಂಡ್ರಿಕ್ಸ್ - ಏಡನ್ ಮಾರ್ಕರಮ್ ಉತ್ತಮ ಜೊತೆಯಾಟ ನೀಡಿದರು.
17 ಎಸೆತಗಳಲ್ಲಿ 4 ಬೌಂಡರಿ ಸಹಿತ ಒಂದು ಸಿಕ್ಸರ್ ಬಾರಿಸಿದ ಏಡನ್ ಮಾರ್ಕರಮ್ 30 ರನ್ ಗಳಿಸಿ ತಂಡದ ರನ್ ಗಳಿಕೆಗೆ ವೇಗ ನೀಡಿದರು. ಮುಖೇಶ್ ಕುಮಾರ್ ಎಸೆತದಲ್ಲಿ ಸಿರಾಜ್ ಗೆ ಕ್ಯಾಚಿತ್ತು ಅವರು ನಿರ್ಗಮಿಸಿದಾಗ ಭಾರತ ತಂಡಕ್ಕೆ ಗೆಲುವಿನ ಭರವಸೆ ಬಂತು. ಆದರೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೀಝಾ ಹೆಂಡ್ರಿಕ್ಸ್ ಟಿ20 ಪಂದ್ಯದ ವೇಗವನ್ನು ಮತ್ತಷ್ಟು ಹೆಚ್ಚಿಸಿ ಭಾರತದ ಗೆಲುವಿನ ಕನಸನ್ನು ದೂರ ಮಾಡಿದರು. ರೀಝಾ ಹೆಂಡ್ರಿಕ್ಸ್ 27 ಎಸೆತದಲ್ಲಿ 4 ಬೌಂಡರಿ ಸಹಿತ ಒಂದು ಸಿಕ್ಸರ್ ಬಾರಿಸಿ 49 ರನ್ ಗಳಿಸಿದ್ದಾಗ ಕುಲ್ ದೀಪ್ ಯಾದವ್ ಎಸೆತದಲ್ಲಿ ಆಫ್ ಸೈಡ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಗೆ ಕ್ಯಾಚ್ ನೀಡಿ ಅರ್ಧ ಶತಕ ವಂಚಿತರಾದರು.
ಉಳಿದಂತೆ ಹೆನ್ರಿಚ್ ಕ್ಲಾಸನ್ 7, ಡೇವಿಡ್ ಮಿಲ್ಲರ್ 17, ಟ್ರಿಸ್ಟನ್ ಸ್ಟಬ್ಸ್ 14, ಆಂಡಿಲೇ ಪೆಹ್ಲಿಕ್ವೋ 10 ರನ್ ಗಳಿಸಿದರು. ಕೊನೆಯವರೆಗೂ ರೋಚಕ ಹೋರಾಟದಲ್ಲಿ ಮುಂದುವರೆದ ಪಂದ್ಯ ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ಗಳ ಜಯ ನೀಡಿತು. ತಮ್ಮದೇ ನೆಲದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಭಾರತದ ಪರ ಮುಖೇಶ್ ಕುಮಾರ್ 2 ವಿಕೆಟ್ ಪಡೆದರು. ಮುಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.







