ದ್ವಿತೀಯ ಟಿ-20: ಐರ್ಲ್ಯಾಂಡ್ ವಿರುದ್ಧ ಭಾರತಕ್ಕೆ 33 ರನ್ ಗೆಲುವು; ಸರಣಿ ಕೈವಶ

Photo: twitter \ @ICC
ಡಬ್ಲಿನ್: ಟ್ವೆಂಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ರವಿವಾರ ಪ್ರವಾಸಿ ಭಾರತವು ಐರ್ಲ್ಯಾಂಡ್ ತಂಡವನ್ನು 33 ರನ್ ಗಳಿಂದ ಸೋಲಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದಿದೆ. ಈಗ ಅದು ಸರಣಿಯಲ್ಲಿ 2-0 ಅಂತರದಿಂದ ಮುಂದಿದೆ.
ಗೆಲುವಿಗೆ 186 ರನ್ ಗಳ ಗುರಿ ಪಡೆದ ಐರ್ಲ್ಯಾಂಡ್ ಗೆ 20 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 152 ರನ್ಗ ಳನ್ನಷ್ಟೆ ಗಳಿಸಲು ಸಾಧ್ಯವಾಯಿತು.
ಆರಂಭಿಕ ಬ್ಯಾಟರ್ ಆಂಡಿ ಬಾಲ್ಬಿರ್ನಿ (51 ಎಸೆತಗಳಲ್ಲಿ 72 ರನ್)ಯ ಸ್ಫೋಟಕ ಅರ್ಧ ಶತಕ ವ್ಯರ್ಥವಾಯಿತು. ಅವರನ್ನು ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್ಗಳು ವಿಫಲರಾದರು.
ಮಾರ್ಕ್ ಅಡೇರ್ 23 ಮತ್ತು ಕರ್ಟಿಸ್ ಕ್ಯಾಂಫರ್ 18 ರನ್ ಗಳ ದೇಣಿಗೆ ನೀಡಿದರು.
ಭಾರತದ ಪರವಾಗಿ ನಾಯಕ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು.
ಭಾರತದ ರಿಂಕು ಸಿಂಗ್ ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ಋತುರಾಜ್ ಗಾಯಕ್ವಾಡ್ರ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 185 ರನ್ ಗಳ ಉತ್ತಮ ಮೊತ್ತವನ್ನೇ ಕಲೆಹಾಕಿತು.
43 ಎಸೆತಗಳಲ್ಲಿ 58 ರನ್ಗಳನ್ನು ಗಳಿಸಿದ ಋತುರಾಜ್ ಭಾರತೀಯ ಇನಿಂಗ್ಸ್ ಗೆ ಸ್ಥಿರತೆ ಒದಗಿಸಿದರು.
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 40 ರನ್ಗಳನ್ನು ಸಿಡಿಸಿ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು.
ಅದೇ ವೇಳೆ, ಐಪಿಎಲ್ ನಲ್ಲಿ ಮಿಂಚೆಬ್ಬಿಸಿದ್ದ ರಿಂಕು ಸಿಂಗ್ 21 ಎಸೆತಗಳಲ್ಲಿ 38 ರನ್ ಗಳನ್ನು ಬಾರಿಸಿ ತಂಡದ ಇನಿಂಗ್ಸ್ ಗೆ ಉತ್ತಮ ಅಂತ್ಯ ಒದಗಿಸಿದರು.
ಭಾರತೀಯ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ 18 ರನ್ಗಳನ್ನು ಗಳಿಸಿ ನಿರ್ಗಮಿಸಿದರು
ಕೊನೆಯಲ್ಲಿ ಶಿವಮ್ ದುಬೆ 16 ಎಸೆತಗಳಲ್ಲಿ 22 ರನ್ ಗಳ ದೇಣಿಗೆಯನ್ನು ತಂಡಕ್ಕೆ ನೀಡಿ ಅಜೇಯರಾಗಿ ಉಳಿದರು.
4 ಓವರ್ ಗಳಲ್ಲಿ 36 ರನ್ ಗಳನ್ನು ನೀಡಿ 2 ವಿಕೆಟ್ ಗಳನ್ನು ಉರುಳಿಸಿದ ಬಾರಿ ಮೆಕಾರ್ತಿ ಐರ್ಲ್ಯಾಂಡ್ ನ ಯಶಸ್ವಿ ಬೌಲರ್ ಆದರು. ಮಾರ್ಕ್ ಅಡೇರ್, ಕ್ರೇಗ್ ಯಂಗ್ ಮತ್ತು ಬೆನ್ ವೈಟ್ ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಮಳೆ ಬಾಧಿತ ಮೊದಲ ಪಂದ್ಯವನ್ನು ಭಾರತ ಡಕ್ವರ್ತ್-ಲೂಯಿಸ್ ನಿಯಮದ ಆಧಾರದಲ್ಲಿ 2 ರನ್ ಗಳಿಂದ ಗೆದ್ದಿತ್ತು.







