ಐತಿಹಾಸಿಕ ಸರಣಿ ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ

Photo Credit : PTI
ಗುವಾಹಟಿ, ನ.25: ಟ್ರಿಸ್ಟನ್ ಸ್ಟಬ್ಸ್(94 ರನ್)ಹಾಗೂ ಟೋನಿ ಡಿ ರೆರ್ಝಿ(49 ರನ್)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ತನ್ನ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 260 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಭಾರತ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 549 ರನ್ ಗುರಿ ನಿಗದಿಪಡಿಸಿತು. ಈ ಮೂಲಕ 25 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿ ಇತಿಹಾಸ ರಚಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಗೆಲ್ಲಲು ಬೃಹತ್ ಗುರಿ ಪಡೆದಿರುವ ಭಾರತ ತಂಡವು ಮಂಗಳವಾರ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಗಳ ನಷ್ಟಕ್ಕೆ 27 ರನ್ ಗಳಿಸಿದ್ದು, ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್(13 ರನ್)ಹಾಗೂ ಕೆ.ಎಲ್.ರಾಹುಲ್(6 ರನ್)ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ. ಸಾಯಿ ಸುದರ್ಶನ್ (ಔಟಾಗದೆ 2, 25 ಎಸೆತ)ಹಾಗೂ ನೈಟ್ ವಾಚ್ಮ್ಯಾನ್ ಕುಲದೀಪ ಯಾದವ್(ಔಟಾಗದೆ 4, 22 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ.
ವೇಗದ ಬೌಲರ್ ಮಾರ್ಕೊ ಜಾನ್ಸನ್ ಅವರು ಇನಿಂಗ್ಸ್ನ ಏಳನೇ ಓವರ್ ನಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟನ್ನು ಪಡೆದು ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರೆ, ಸ್ಪಿನ್ನರ್ ಸೈಮನ್ ಹಾರ್ಮರ್ ಅವರು 10ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.
ಈಗಾಗಲೇ ಎರಡು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ ಸರಣಿ ಸಮಬಲಗೊಳಿಸಲು ಇನ್ನೂ 522 ರನ್ ಗಳಿಸುವ ಅಗತ್ಯವಿದೆ. ಈ ಟೆಸ್ಟ್ನ ಮೂಲಕ ಎಲ್ಲ 12 ಡಬ್ಲ್ಯುಟಿಸಿ ಪಾಯಿಂಟ್ಸ್ ಗಳಿಸಲು ಬವುಮಾ ಬಳಗಕ್ಕೆ ಇನ್ನು 8 ವಿಕೆಟ್ ಗಳ ಅಗತ್ಯವಿದೆ.
ಆತಿಥೇಯ ಭಾರತ ತಂಡವು 12 ತಿಂಗಳಲ್ಲಿ ಎರಡನೇ ಬಾರಿ ಸ್ವದೇಶದಲ್ಲಿ ವೈಟ್ ವಾಶ್ ಗೆ ಒಳಗಾಗುವ ಭೀತಿಯಲ್ಲಿದೆ. 2024ರಲ್ಲಿ ನ್ಯೂಝಿಲ್ಯಾಂಡ್ ತಂಡ ವಿರುದ್ಧ 0-3 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು.
►ಸ್ವದೇಶದಲ್ಲಿ ಎರಡನೇ ಬಾರಿ ಗೆಲ್ಲಲು 500ಕ್ಕೂ ಅಧಿಕ ರನ್ ಗುರಿ ಪಡೆದ ಭಾರತ
ದಕ್ಷಿಣ ಆಫ್ರಿಕಾವು ಭಾರತ ನೆಲದಲ್ಲಿ ಭಾರೀ ಅಂತರದ ಮುನ್ನಡೆ(549 ರನ್)ಪಡೆದಿರುವ ಪ್ರವಾಸಿ ತಂಡವಾಗಿದೆ. ಈ ಹಿಂದೆ 2004ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯ ತಂಡ 542 ರನ್ ಮುನ್ನಡೆ ಪಡೆದಿತ್ತು.
ದಕ್ಷಿಣ ಆಫ್ರಿಕಾ ತಂಡವು ಸರಣಿ ಕ್ಲೀನ್ ಸ್ವೀಪ್ ಗೈಯ್ಯಲು ಕೊನೆಯ ದಿನದಾಟವಾದ ಬುಧವಾರ ಮೂರು ಸೆಶನ್ ಗಳಲ್ಲಿ ಆರು ಗಂಟೆಗಳಲ್ಲಿ ಭಾರತದ 8 ವಿಕೆಟ್ ಗಳನ್ನು ಉರುಳಿಸಬೇಕಾಗಿದೆ. ಏಕೆಂದರೆ ಸಂಜೆ 4 ಗಂಟೆಯ ನಂತರ ಮಂದ ಬೆಳಕಿನಿಂದಾಗಿ ಹೆಚ್ಚುವರಿ ಸಮಯ ಆಡಲು ಸಾಧ್ಯವಾಗುತ್ತಿಲ್ಲ.
ಭಾರತ ತಂಡವು ಏಶ್ಯದಲ್ಲಿ ಈ ತನಕ ಎದುರಿಸದ ಕಠಿಣ ಗುರಿಯನ್ನು ಬೆನ್ನಟ್ಟಲಾರಂಭಿಸಿದೆ. ಏಶ್ಯದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ 395 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿತ್ತು. 2021ರಲ್ಲಿ ಚಟ್ಟೋಗ್ರಾಮ್ ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ವೆಸ್ಟ್ಇಂಡೀಸ್ ತಂಡ ಈ ಸಾಧನೆ ಮಾಡಿತ್ತು. ಭಾರತ ತಂಡವು 2008ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 387 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.
ಭಾರತ ತಂಡ ಈ ಶತಮಾನದಲ್ಲಿ ಕೇವಲ ಒಂದು ಸಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಾಲ್ಕನೇ ಇನಿಂಗ್ಸ್ ನಲ್ಲಿ 100ಕ್ಕೂ ಅಧಿಕ ಓವರ್ ಬ್ಯಾಟಿಂಗ್ ಮಾಡಿತ್ತು. 2021ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ಧ 131 ಓವರ್ ಗಳ ಬ್ಯಾಟಿಂಗ್ ಮಾಡಿತ್ತು.
ಭಾರತ ತಂಡವು ಸ್ವದೇಶದಲ್ಲಿ ಎರಡನೇ ಬಾರಿ ಗೆಲ್ಲಲು 500ಕ್ಕೂ ಅಧಿಕ ರನ್ ಗುರಿಯನ್ನು ಪಡೆದಿದೆ. ಈ ಹಿಂದೆ 2004ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯ ತಂಡವು 543 ರನ್ ಗುರಿ ನೀಡಿತ್ತು. ಆ ಪಂದ್ಯವನ್ನು ಭಾರತ ತಂಡವು 342 ರನ್ ಗಳ ಅಂತರದಿಂದ ಸೋತಿತ್ತು. ಅದು ಈಗಲೂ ರನ್ ಗಳ ಅಂತರದಲ್ಲಿ ಭಾರತದ ಅತಿ ದೊಡ್ಡ ಸೋಲಾಗಿದೆ.
ಕೊನೆಯ ದಿನದಾಟದಲ್ಲಿ ಸ್ಪಿನ್ನರ್ ಗಳು ಮೇಲುಗೈ ಸಾಧಿಸಬಹುದು. ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಪಿನ್ನರ್ ಗಳಾದ ಕೇಶವ ಮಹಾರಾಜ್, ಹಾರ್ಮರ್ ಹಾಗೂ ಎಸ್. ಮುತ್ತುಸಾಮಿ ಅವರಿದ್ದಾರೆ. ಮೂರನೇ ದಿನದಾಟದಲ್ಲಿ ಶಾರ್ಟ್ ಪಿಚ್ ಬೌಲಿಂಗ್ ನ ಮೂಲಕ ಭಾರತಕ್ಕೆ ಒತ್ತಡ ಹೇರಿದ್ದ ಜಾನ್ಸನ್ ಕೊನೆಯ ದಿನ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. ಟೀಮ್ ಇಂಡಿಯಾವು ಸರಣಿಯಲ್ಲಿ ವೈಟ್ ವಾಶ್ ಗೊಳಗಾಗುವ ಆತಂಕದಲ್ಲಿದೆ.
► ದಕ್ಷಿಣ ಆಫ್ರಿಕಾ 260/5: ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೆ 26 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು 78.3 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 260 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ಆರಂಭಿಕ ಆಟಗಾರರಾದ ರಯಾನ್ ರಿಕೆಲ್ಟನ್(35 ರನ್, 64 ಎಸೆತ)ಹಾಗೂ ಮರ್ಕ್ರಮ್(29 ರನ್,84 ಎಸೆತ)ಮೊದಲ ವಿಕೆಟ್ಗೆ 59 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರಿಕೆಲ್ಟನ್ ವಿಕೆಟನ್ನು ಪಡೆದ ಜಡೇಜ ಈ ಜೋಡಿಯನ್ನು ಬೇರ್ಪಡಿಸಿದರು. ರಿಕೆಲ್ಟನ್ ವಿಕೆಟ್ ಒಪ್ಪಿಸಿದ 10 ಓವರ್ ಗಳ ನಂತರ ಮರ್ಕ್ರಮ್(29 ರನ್)ಜಡೇಜಗೆ ಕ್ಲೀನ್ ಬೌಲ್ಡಾದರು. ನಾಯಕ ಟೆಂಬಾ ಬವುಮಾ(3 ರನ್) ವಾಶಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು. ಆಗ ದಕ್ಷಿಣ ಆಫ್ರಿಕಾ 77 ರನ್ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು.
18 ರನ್ಗೆ ಮೂರು ವಿಕೆಟ್ ಗಳನ್ನು ಉರುಳಿಸಿದ ರವೀಂದ್ರ ಜಡೇಜ(4-62)ಹಾಗೂ ವಾಶಿಂಗ್ಟನ್ ಸುಂದರ್(1-67)ಭಾರತಕ್ಕೆ ಮರು ಹೋರಾಡುವ ವಿಶ್ವಾಸ ಮೂಡಿಸಿದ್ದರು. ಆಗ ಟ್ರಿಸ್ಟನ್ ಸ್ಟಬ್ಸ್ ಹಾಗೂ ಟೋನಿ ರೆರ್ಝಿ ನಾಲ್ಕನೇ ವಿಕೆಟ್ಗೆ ನಿರ್ಣಾಯಕ 101 ರನ್ ಜೊತೆಯಾಟ ನಡೆಸಿ ಭಾರತೀಯ ಸ್ಪಿನ್ನರ್ ಗಳನ್ನು ಹತಾಶೆಗೊಳಿಸಿದರು.
3ನೇ ಕ್ರಮಾಂಕದಲ್ಲಿ ದಿಟ್ಟ ಪ್ರದರ್ಶನ ನೀಡಿದ ಟ್ರಿಸ್ಟನ್ ಸ್ಟಬ್ಸ್(94 ರನ್, 180 ಎಸೆತ, 9 ಬೌಂಡರಿ,1 ಸಿಕ್ಸರ್)ಕೇವಲ ಆರು ರನ್ ನಿಂದ ಚೊಚ್ಚಲ ಶತಕದಿಂದ ವಂಚಿತರಾದರು. ಟೋನಿ ರೆರ್ಝಿ(49 ರನ್, 68 ಎಸೆತ, 4 ಬೌಂಡರಿ,1 ಸಿಕ್ಸರ್)ಬ್ಯಾಟಿಂಗ್ ನಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದರು.
ಟೋನಿ ಅರ್ಧಶತಕದಿಂದ ವಂಚಿತರಾಗಿ ಜಡೇಜ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದ ನಂತರ ವಿಯಾನ್ ಮುಲ್ದರ್(ಔಟಾಗದೆ 35, 69 ಎಸೆತ, 5 ಬೌಂಡರಿ)ಅವರೊಂದಿಗೆ ಕೈಜೋಡಿಸಿದ ಸ್ಟಬ್ಸ್ಸ್ ಅಮೂಲ್ಯ 82 ರನ್ ಸೇರಿಸಿದರು. 5 ವಿಕೆಟ್ ಗಳ ನಷ್ಟಕ್ಕೆ 260 ರನ್ ಗಳಿಸಿದಾಗ ನಾಯಕ ಟೆಂಬಾ ಬವುಮಾ ತನ್ನ ತಂಡದ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಭಾರತ ತಂಡದ ಗೆಲುವಿಗೆ ಕಠಿಣ ಗುರಿ ನಿಗದಿಪಡಿಸಿದರು.







