ಬ್ರಿಜ್ಭೂಷಣ್ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ : ವಿನೇಶ್ ಪೋಗಟ್

ವಿನೇಶ್ ಪೋಗಟ್, ಬ್ರಿಜ್ಭೂಷಣ್ | PTI
ಹೊಸದಿಲ್ಲಿ : ದಿಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಭಾರತದ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದಿಲ್ಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಆರೋಪಿಸಿದ್ದಾರೆ.
ಭದ್ರತೆಯನ್ನು ಹಿಂತೆಗೆದುಕೊಂಡಿರುವುದು ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ವಿನೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಜ್ಭೂಷಣ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದಿಲ್ಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಎಕ್ಸ್ನಲ್ಲಿ ವಿನೇಶ್ ಫೋಗಟ್ ಪೋಸ್ಟ್ ಮಾಡಿದ್ದಾರೆ.
ಜಂತರ್ಮಂತರ್ನಲ್ಲಿ ನಡೆದಿದ್ದ ಧರಣಿಯ ವೇಳೆ ವಿನೇಶ್ ಅವರು ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ರೊಂದಿಗೆ ಬೀದಿಗಳಲ್ಲಿ ರಾತ್ರಿಗಳನ್ನು ಕಳೆದಿದ್ದರು.
ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ)ವಿರುದ್ಧದ ತನ್ನ ಹೋರಾಟ ಮುಂದುವರಿಯಲಿದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಪ್ಯಾರಿಸ್ ಒಲಿಂಪಿಕ್ಸ್ನಿಂದ ಸ್ವದೇಶಕ್ಕೆ ವಾಪಸಾದ ನಂತರ ವಿನೇಶ್ ಹೇಳಿದ್ದರು.
ಒಲಿಂಪಿಕ್ಸ್ನಲ್ಲಿ 50 ಕೆಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ಗೆ ತಲುಪಿದ ನಂತರ 100ಗ್ರಾಂ ಹೆಚ್ಚು ತೂಕವಿದ್ದ ಕಾರಣಕ್ಕೆ ವಿನೇಶ್ ಒಲಿಂಪಿಕ್ಸ್ನಿಂದ ಅನರ್ಹರಾಗಿದ್ದರು. ಅನರ್ಹತೆ ವಿರುದ್ಧ ವಿನೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್)ತಿರಸ್ಕರಿಸಿತ್ತು.







