ಪ್ಯಾರಿಸ್ ಒಲಿಂಪಿಕ್ಸ್ ಗೆ ಶೂಟರ್ ಗಳ ಆಯ್ಕೆ ಸ್ಪರ್ಧೆ | 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ನಲ್ಲಿ ಇಶಾ ಸಿಂಗ್ ಪ್ರಥಮ

ಇಶಾ ಸಿಂಗ್ | PC : PTI
ಹೊಸದಿಲ್ಲಿ: ಶುಕ್ರವಾರ ನಡೆದ ಮೊದಲ ಒಲಿಂಪಿಕ್ ಆಯ್ಕೆ ಸ್ಪರ್ಧೆಯಲ್ಲಿ, ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಇಶಾ ಸಿಂಗ್ 585 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿದ್ದಾರೆ.
ತುಘಲಕಾಬಾದ್ನ ಡಾ. ಕ್ರಾಂತಿ ಸಿಂಗ್ ರೇಂಜ್ನಲ್ಲಿ ನಡೆದ ಸ್ಪರ್ಧೆಯಲ್ಲಿ, 19 ವರ್ಷದ ಇಶಾ ಪ್ರೆಸಿಶನ್ ಸ್ಟೇಜ್ನಲ್ಲಿ 291 ಮತ್ತು ರ್ಯಾಪಿಡ ಫಯರ್ ವಿಭಾಗದಲ್ಲಿ 291 ಅಂಕಗಳನ್ನು ಗಳಿಸಿದರು.
ಚೀನಾದ ಹಾಂಗ್ಝೂನಲ್ಲಿ ಕಳೆದ ವರ್ಷ ನಡೆದ ಏಶ್ಯನ್ ಗೇಮ್ಸ್ನಲ್ಲಿ ಅವರು ನಾಲ್ಕು ಪದಕಗಳನ್ನು ಗೆದ್ದಿದ್ದರು.
ಸಿಮ್ರಾನ್ಪ್ರೀತ್ ಕೌರ್ ಬ್ರಾರ್ ರ್ಯಾಪಿಡ್ ಫಯರ್ ವಿಭಾಗದಲ್ಲಿ 295 ಅಂಕಗಳನ್ನು ಗಳಿಸಿ ಒಟ್ಟು 583 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರು. ಅವರು ಮನು ಭಾಕರ್, ಅಭಿದ್ಯಾ ಪಾಟೀಲ್ ಮತ್ತು ರಿದಮ್ ಸಂಗವಾನ್ರನ್ನು ಹಿಂದಿಕ್ಕಿದರು.
ಇದರ ಫೈನಲ್ ಶನಿವಾರ ನಡೆಯಲಿದೆ. ಶನಿವಾರವೇ ಪುರುಷರ ರ್ಯಾಪಿಡ್ ಫಯರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಕೂಡ ನಡೆಯಲಿದೆ.
ಪುರುಷರ 25 ಮೀಟರ್ ರ್ಯಾಪಿಡ್ ಫಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ, 580 ಅಂಕಗಳನ್ನು ಗಳಿಸಿದ ಭವೇಶ್ ಶೇಖಾವತ್ ಮೊದಲ ಸ್ಥಾನ ಗಳಿಸಿದರು. ಎರಡು ಮತ್ತು ಮೂರನೇ ಸ್ಥಾನಗಳನ್ನು ಈಗಾಗಲೇ ಒಲಿಂಪಿಕ್ ಕೋಟ ವಿಜೇತರಾಗಿರುವ ವಿಜಯವೀರ ಸಿದು (579) ಮತ್ತು ಅನಿಶ್ ಭನ್ವಾಲ (578) ಗಳಿಸಿದರು.
ರೈಫಲ್ ಮತ್ತು ಪಿಸ್ತೂಲ್ ಶೂಟರ್ಗಳು ನಾಲ್ಕು ಒಲಿಂಪಿಕ್ ಆಯ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ಪೈಕಿ ಅತ್ಯುತ್ತಮ ಮೂರು ಸ್ಕೋರ್ಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.







