ಲೈಂಗಿಕ ದೌರ್ಜನ್ಯ ಪ್ರಕರಣ: ಮಾಜಿ ಫುಟ್ಬಾಲ್ ಆಟಗಾರನಿಗೆ 4.5 ವರ್ಷ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ
ಕ್ಯಾಟಲೋನಿಯ (ಸ್ಪೇನ್): 2022ರಲ್ಲಿ ಬ್ರೆಝಿಲ್ ನ ಮಾಜಿ ಫುಟ್ಬಾಲ್ ಆಟಗಾರ ಡಾನಿ ಆಲ್ವಿಸ್ ಬಾರ್ಸಿಲೋನ ನೈಟ್ಕ್ಲಬ್ ಒಂದರಲ್ಲಿ ಮಹಿಳೆಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾಗಿದೆ ಎಂದು ಸ್ಪೇನ್ ದೇಶದ ಕ್ಯಾಟಲೋನಿಯ ನಗರದ ಸರ್ವೋಚ್ಛ ನ್ಯಾಯಾಲಯವು ಗುರುವಾರ ಹೇಳಿದೆ.
ನ್ಯಾಯಾಲಯವು ಆಟಗಾರನಿಗೆ 4.5 ವರ್ಷಗಳ ಜೈಲುವಾಸ ವಿಧಿಸಿದೆ ಮತ್ತು ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ 1,50,000 ಯುರೋ (ಸುಮಾರು 1.34 ಕೋಟಿ ರೂಪಾಯಿ) ಪಾವತಿಸುವಂತೆ ಆದೇಶಿಸಿದೆ.
‘‘ಲೈಂಗಿಕ ಸಂಪರ್ಕಕ್ಕೆ ಸಂತ್ರಸ್ತೆ ಒಪ್ಪಿಗೆ ನೀಡಿಲ್ಲ ಎನ್ನುವುದು ಸಾಬೀತಾಗಿದೆ. ದೂರುದಾರ ಮಹಿಳೆಯ ಹೇಳಿಕೆಗೆ ಹೆಚ್ಚುವರಿಯಾಗಿ, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದಕ್ಕೆ ಪುರಾವೆಯಿದೆ’’ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ಅದು ಸಹಮತದ ಲೈಂಗಿಕ ಸಂಪರ್ಕವಾಗಿತ್ತು ಎಂದು ಆಲ್ವಿಸ್ ವಾದಿಸಿದ್ದರು. ಆರೋಪಿಗೆ ಒಂಭತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್ ಒತ್ತಾಯಿಸಿದ್ದರು.
40 ವರ್ಷದ ಬಾರ್ಸಿಲೋನ ತಂಡದ ಮಾಜಿ ಆಟಗಾರನನ್ನು ಕಳೆದ ವರ್ಷದ ಜನವರಿಯಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದರು.





