ಪಾಕ್ ಟೆಸ್ಟ್, ಟಿ20 ತಂಡದ ನಾಯಕರಾಗಿ ಶಾನ್ ಮಸೂದ್, ಶಹೀನ್ ಅಫ್ರಿದಿ

ಶಹೀನ್ ಶಾ ಅಫ್ರಿದಿ | Photo: NDTV
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಟೆಸ್ಟ್ ನಾಯಕನಾಗಿ ಶಾನ್ ಮಸೂದ್ ಮತ್ತು ಟಿ20 ನಾಯಕನಾಗಿ ಶಹೀನ್ ಶಾ ಅಫ್ರಿದಿಯನ್ನು ಗುರುವಾರ ನೇಮಿಸಲಾಗಿದೆ.
ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ತಂಡದ ಮೂರೂ ಮಾದರಿಗಳ ನಾಯಕತ್ವಕ್ಕೆ ಬುಧವಾರ ಬಾಬರ್ ಅಝಮ್ ರಾಜೀನಾಮೆ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಸದ್ಯಕ್ಕೆ ಯಾವುದೇ ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳು ಇಲ್ಲದಿರುವುದರಿಂದ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಏಕದಿನ ತಂಡದ ನಾಯಕನನ್ನು ಪ್ರಕಟಿಸಿಲ್ಲ.
‘‘ಕ್ರಿಕೆಟ್ ಮಂಡಳಿ ಮತ್ತು ಈ ಜವಾಬ್ದಾರಿಯನ್ನು ನಾನು ನಿಭಾಯಿಸಬಹುದು ಎಂಬುದಾಗಿ ಭಾವಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ’’ ಎಂದು ನಾಯಕನಾಗಿ ತನ್ನ ನೇಮಕಾತಿಯ ಬಳಿಕ ಮಸೂದ್ ಹೇಳಿದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023-25ರ ಸರಣಿಯ ಕೊನೆಯವರೆಗೆ ಮಸೂದ್ ನಾಯಕರಾಗಿರುತ್ತಾರೆ ಎಂದು ಪಿಸಿಬಿ ಹೇಳಿದೆ.
ಡಿಸೆಂಬರ್ 14ರಂದು ಆಸ್ಟ್ರೇಲಿಯದಲ್ಲಿ ಆರಂಭಗೊಳ್ಳುವ ಮೂರು ಪಂದ್ಯಗಳ ದ್ವಿಪಕ್ಷೀಯ ಟೆಸ್ಟ್ ಸರಣಿಯು ನಾಯಕನಾಗಿ ಅವರ ಮೊದಲ ಸರಣಿಯಾಗಲಿದೆ.
ಜನವರಿ 12ರಿಂದ 21ರವರೆಗೆ ನ್ಯೂಝಿಲ್ಯಾಂಡ್ ನಲ್ಲಿ ನಡೆಯಲಿರುವ ಐದು ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯು ನಾಯಕನಾಗಿ ಶಹೀನ್ ಅಫ್ರಿದಿಯ ಮೊದಲ ಸರಣಿಯಾಗಿರುತ್ತದೆ.
ಪಿಸಿಬಿಯು ಪಾಕಿಸ್ತಾನ ತಂಡದ ಮಾಜಿ ನಾಯಕ ಮುಹಮ್ಮದ್ ಹಫೀಝ್ ಅವರನ್ನು ಪುರುಷರ ಕ್ರಿಕೆಟ್ ತಂಡದ ನೂತನ ನಿರ್ದೇಶಕನಾಗಿ ನೇಮಿಸಿದೆ. ಕೋಚಿಂಗ್ ಸಿಬ್ಬಂದಿಯನ್ನೂ ಬದಲಾಯಿಸಿದೆ.







