ನಿವೃತ್ತಿಯಿಂದ ಹಿಂದೆ ಸರಿದ ಲೆಜೆಂಡ್ ಶಬ್ನಿಮ್ ಇಸ್ಮಾಯೀಲ್; ದಕ್ಷಿಣ ಆಫ್ರಿಕಾದ T20 ವಿಶ್ವಕಪ್ ತಂಡದಲ್ಲಿ ಸ್ಥಾನ

ಶಬ್ನಿಮ್ ಇಸ್ಮಾಯೀಲ್ | Photo Credit : PTI
ಹೊಸದಿಲ್ಲಿ, ಮೇ 12: ದಕ್ಷಿಣ ಆಫ್ರಿಕಾದ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ತಂಡವು ಮುಂಬರುವ T20 ವಿಶ್ವಕಪ್ ಟೂರ್ನಿಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. ವೇಗದ ಬೌಲರ್ ಶಬ್ನಿಮ್ ಇಸ್ಮಾಯೀಲ್ ವಾಪಸಾತಿಯು ಅತ್ಯಂತ ದೊಡ್ಡ ಅಚ್ಚರಿಯ ವಿಚಾರವಾಗಿದೆ.
ಅನುಭವಿ ವೇಗದ ಬೌಲರ್ ಇಸ್ಮಾಯೀಲ್ ಈ ಹಿಂದೆ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು. ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ವಾಪಸಾಗಲು ಇಸ್ಮಾಯೀಲ್ ನಿರ್ಧರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಶ್ರೇಷ್ಠ ವೇಗದ ಬೌಲರ್ಗಳ ಪೈಕಿ ಒಬ್ಬರಾಗಿರುವ ಇಸ್ಮಾಯೀಲ್, T20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 123 ವಿಕೆಟ್ಗಳನ್ನು ಉರುಳಿಸಿದ್ದರು. ಇದೀಗ ಅವರು ತಂಡಕ್ಕೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
37ರ ವಯಸ್ಸಿನ ಇಸ್ಮಾಯೀಲ್ 2023ರ ಮಹಿಳೆಯರ T20 ವಿಶ್ವಕಪ್ ವೇಳೆ ಕೊನೆಯ ಬಾರಿ ಆಡಿದ್ದರು. ಆಗ ದಕ್ಷಿಣ ಆಫ್ರಿಕಾ ತಂಡವು ಫೈನಲ್ಗೆ ತಲುಪಿತ್ತು. ಆದರೆ ಆಸ್ಟ್ರೇಲಿಯ ತಂಡದ ವಿರುದ್ಧ ಸೋತಿತ್ತು.
ಸ್ಟಾರ್ ಬ್ಯಾಟರ್ ಲಾರಾ ವೋಲ್ವಾರ್ಟ್ ಸತತ ಎರಡನೇ T20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ನಾಯಕತ್ವ ವಹಿಸಲಿದ್ದಾರೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ಸ್ ಅಪ್ ಆಗಿದ್ದ ದಕ್ಷಿಣ ಆಫ್ರಿಕಾ ತಂಡವು ತನ್ನ ಚೊಚ್ಚಲ T20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಮತ್ತೊಮ್ಮೆ ಪ್ರಯತ್ನಿಸುವ ಗುರಿ ಇಟ್ಟುಕೊಂಡಿದೆ.
ವೋಲ್ವಾರ್ಟ್ ಅವರು ತಝ್ಮಿನ್ ಬ್ರಿಟ್ಸ್, ಸುನೆ ಲೂಸ್ ಹಾಗೂ ಮಾಜಿ ನಾಯಕಿ ಡೇನ್ ವಾನ್ ನೀಕರ್ಕ್ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಜೂನ್ 13ರಂದು ಮ್ಯಾಂಚೆಸ್ಟರ್ನಲ್ಲಿ ಆಸ್ಟ್ರೇಲಿಯ ಮಹಿಳೆಯರ ಕ್ರಿಕೆಟ್ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
*ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡ: ಲಾರಾ ವೋಲ್ವಾರ್ಟ್ (ನಾಯಕಿ), ತಝ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲಾರ್ಕ್, ಅನ್ನೇರಿ ಡೆರ್ಕ್ಸೆನ್, ಶಬ್ನಿಮ್ ಇಸ್ಮಾಯೀಲ್, ಸಿನಾಲೊ ಜಫ್ತಾ, ಮರಿಝಾನ್ ಕಾಪ್, ಅಯಾಬೊಂಗಾ ಖಾಕಾ, ಸುನೆ ಲೂಸ್, ಕರಾಬೊ ಮೆಸೊ, ನಾನ್ಕುಲುಲೆಕೊ ಮ್ಲಾಬಾ, ಕೈಲಾ ರೀನೆಕ್, ಟುಮಿ ಸೆಖುಖುನ್, ಕ್ಲೋಯ್ ಟ್ರಿಯಾನ್, ಡೇನ್ ವ್ಯಾನ್ ನೀಕರ್ಕ್.






