ಆಸ್ಟ್ರೇಲಿಯ ವಿರುದ್ಧ ಸೆಮಿ ಫೈನಲ್ ಪಂದ್ಯಕ್ಕೆ ಶೆಫಾಲಿ ವರ್ಮಾ ಆಯ್ಕೆ

ಶೆಫಾಲಿ ವರ್ಮಾ | Photo Credit : PTI
ಹೊಸದಿಲ್ಲಿ, ಅ.27: ಆಸ್ಟ್ರೇಲಿಯ ತಂಡದ ವಿರುದ್ಧ ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಕ್ಕೆ ಕೇವಲ 2 ದಿನಗಳಿರುವಾಗ ಗಾಯಗೊಂಡಿರುವ ಪ್ರತಿಕಾ ರಾವಲ್ ಬದಲಿಗೆ ಶೆಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ಬಾಂಗ್ಲಾದೇಶ ವಿರುದ್ದದ ಕೊನೆಯ ಲೀಗ್ ಪಂದ್ಯದ ವೇಳೆ ಗಾಯಗೊಂಡಿರುವ ರಾವಲ್ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ. ಪ್ರಧಾನ ಹಾಗೂ ಮೀಸಲು ತಂಡಗಳಿಂದ ಹೊರಗಿದ್ದ 21ರ ಹರೆಯದ ಶೆಫಾಲಿ ಅವರನ್ನು ಇದೀಗ ಆಯ್ಕೆ ಮಾಡಲಾಗಿದೆ.
ಶೆಫಾಲಿ ಮರಳಿಕೆಯಿಂದಾಗಿ ಭಾರತದ ಅಗ್ರ ಸರದಿಯಲ್ಲಿ ಆಕ್ರಮಣಕಾರಿ ಆಟ ಕಂಡುಬರಲಿದ್ದು, ಯುವ ಆಟಗಾರ್ತಿ ದೇಶೀಯ ಹಾಗೂ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. 2025ರ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 304 ರನ್ ಗಳಿಸಿದ್ದರು. ಹರ್ಯಾಣದ ಪರ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 527 ರನ್ ಕಲೆ ಹಾಕಿದ್ದರು.
ಶೆಫಾಲಿ 2024ರ ಅಕ್ಟೋಬರ್ನಿಂದ ಭಾರತದ ಪರ ಏಕದಿನ ಪಂದ್ಯವನ್ನು ಆಡದೇ ಇದ್ದರೂ ಇತ್ತೀಚೆಗೆ ಆಸ್ಟ್ರೇಲಿಯ ‘ಎ’ ಹಾಗೂ ನ್ಯೂಝಿಲ್ಯಾಂಡ್ ‘ಎ’ ತಂಡಗಳ ವಿರುದ್ದ ಭಾರತ ‘ಎ’ ತಂಡ ಪರ ಉತ್ತಮ ಪ್ರದರ್ಶನ ನೀಡಿದ್ದರು.
ಆಸ್ಟ್ರೇಲಿಯದ ವಿರುದ್ಧ ಸೆಮಿ ಫೈನಲ್ ಪಂದ್ಯವು ಅ.30ರಂದು ನಡೆಯಲಿದೆ.





