ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಶಾಹೀನ್ ಅಫ್ರಿದಿ ಆಯ್ಕೆ

ಶಾಹೀನ್ ಅಫ್ರಿದಿ | PTI
ಕರಾಚಿ, ಅ.21: ವಿಕೆಟ್ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್ ಬದಲಿಗೆ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನದ ಪುರುಷರ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸೋಮವಾರ ಪ್ರಕಟಿಸಿದೆ.
ಬೆಟ್ಟಿಂಗ್ ಕಂಪೆನಿಗಳನ್ನು ಬೆಂಬಲಿಸಲು ನಿರಾಕರಿಸಿರುವುದು ರಿಝ್ವಾನ್ರನ್ನು ನಾಯಕ ಸ್ಥಾನದಿಂದ ತೆಗೆದುಹಾಕಲು ಕಾರಣ ಎಂದು ‘ಟೈಮ್ಸ್ ಆಫ್ ಇಂಡಿಯಾ.ಕಾಮ್’ ವರದಿ ಮಾಡಿದೆ.
‘ರಿಝ್ವಾನ್ ಬೆಟ್ಟಿಂಗ್ ಕಂಪೆನಿಗಳನ್ನು ಬೆಂಬಲಿಸುವುದಿಲ್ಲ ಎಂದು ಪಿಸಿಬಿಗೆ ತಿಳಿಸಿದ್ದರು. ಇದು ಅವರನ್ನು ವಜಾಗೊಳಿಸಲು ಮುಖ್ಯ ಕಾರಣವಾಗಿದೆ. ಬೆಟ್ಟಿಂಗ್ ಸಂಸ್ಥೆಯೊಂದಿಗೆ ಪಿಸಿಬಿ ಸಹಯೋಗವನ್ನು ರಿಝ್ವಾನ್ ವಿರೋಧಿಸಿದ್ದರು’ ಎಂದು ಪಿಸಿಬಿ ಮೂಲವೊಂದು ‘ಟೈಮ್ಸ್ ಆಫ್ ಇಂಡಿಯಾ.ಕಾಮ್’ಗೆ ತಿಳಿಸಿದೆ.
ಈ ವರ್ಷಾರಂಭದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ(ಸಿಪಿಎಲ್)ಸೇಂಟ್ ಕಿಟ್ಸ್ ಹಾಗೂ ನೆವಿಸ್ ಪ್ಯಾಟ್ರಿಯಾಟ್ಸ್ ಪರ ಆಡುವಾಗ ಬೆಟ್ಟಿಂಗ್ ಕಂಪೆನಿಯ ಲೋಗೊವಿರುವ ಜೆರ್ಸಿ ಧರಿಸಲು ರಿಝ್ವಾನ್ ನಿರಾಕರಿಸಿದ್ದರು. ಬೆಟ್ಟಿಂಗ್ ವೆಬ್ಸೈಟ್ಗೆ ಸಂಬಂಧಿಸಿದ ಪ್ರಧಾನ ಪ್ರಾಯೋಜಕರ ಲೋಗೊ ಇಲ್ಲದ ಜೆರ್ಸಿ ಧರಿಸಿ ರಿಝ್ವಾನ್ ಆಡಿದ್ದರು.
ಶಾಹೀನ್ ಅಫ್ರಿದಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 4ರಿಂದ 8ರ ತನಕ ಫೈಸಲಾಬಾದ್ನ ಇಕ್ಬಾಲ್ ಸ್ಟೇಡಿಯಂಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಶಾಹೀನ್ ಅಫ್ರಿದಿ ಈ ಹಿಂದೆ ಟಿ-20 ತಂಡದ ನಾಯಕನಾಗಿದ್ದರು. ಇಸ್ಲಾಮಾಬಾದ್ನಲ್ಲಿ ನಡೆದ ಸಭೆಯ ನಂತರ ಮುಂಬರುವ ಸರಣಿಗೆ ಶಾಹೀನ್ ಅವರ ನೇಮಕಾತಿಯನ್ನು ಅಂತಿಮಗೊಳಿಸಲಾಯಿತು. ಈ ವೇಳೆ ಮುಖ್ಯ ತರಬೇತುದಾರ ಮೈಕ್ ಹೆಸನ್, ಉನ್ನತ ಪ್ರದರ್ಶನ ನಿರ್ದೇಶಕ ಅಕಿಬ್ ಜಾವೇದ್ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
2023ರಿಂದ ಪಾಕಿಸ್ತಾನ ಕ್ರಿಕೆಟ್, ನಾಯಕತ್ವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ವಿವಿಧ ಪಿಸಿಬಿ ಆಡಳಿತಗಳ ಅಡಿಯಲ್ಲಿ ಎಲ್ಲ 3 ಮಾದರಿಯ ಕ್ರಿಕೆಟ್ನಲ್ಲಿ ಅನೇಕ ಆಟಗಾರರು ತಂಡವನ್ನು ಮುನ್ನಡೆಸಿದ್ದಾರೆ.







