ಎಲ್ಲ 12 ಟೆಸ್ಟ್ ಆಡುವ ದೇಶಗಳ ವಿರುದ್ಧ ಶತಕ ಗಳಿಸಿದ ಮೊದಲ ಬ್ಯಾಟರ್ ಹೋಪ್

Photo Credit : AFP
ನೇಪಿಯರ್, ನ.19: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ಬುಧವಾರ ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಔಟಾಗದೆ 109 ರನ್ ಗಳಿಸಿದ ವೆಸ್ಟ್ಇಂಡೀಸ್ ತಂಡದ ನಾಯಕ ಶಾಯ್ಹೋಪ್ ‘ಒನ್ ಮ್ಯಾನ್’ಶೋ ನೀಡಿದರು. ಹೋಪ್ ಅವರ ಪ್ರಯತ್ನ ವಿಂಡೀಸ್ ಗೆ ಗೆಲುವು ತಂದುಕೊಡಲಿಲ್ಲ. ಆತಿಥೇಯರು 248 ರನ್ ಗುರಿಯನ್ನು ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಐದು ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದ್ದಾರೆ.
ಮಳೆಯಿಂದಾಗಿ 34 ಓವರ್ಗಳಿಗೆ ಕಡಿತಗೊಂಡಿರುವ ಪಂದ್ಯದಲ್ಲಿ ಹೋಪ್ ಅವರು 69 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಔಟಾಗದೆ 109 ರನ್ ಗಳಿಸಿದರು. ಹೋಪ್ ಶತಕದ ಸಹಾಯದಿಂದ ವೆಸ್ಟ್ಇಂಡೀಸ್ 9 ವಿಕೆಟ್ ಗಳ ನಷ್ಟಕ್ಕೆ 247 ರನ್ ಗಳಿಸಿತು.
ತನ್ನ ಏಕಾಂಗಿ ಹೋರಾಟದ ವೇಳೆ ಹೋಪ್ ಅವರು ಹಲವು ದಾಖಲೆಗಳನ್ನು ಮುರಿದರು. ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಮೊದಲ ಶತಕವನ್ನು ಗಳಿಸಿರುವ ಹೋಪ್ ವೆಸ್ಟ್ಇಂಡೀಸ್ನ ಸಾರ್ವಕಾಲಿಕ ಶ್ರೇಷ್ಠ ಏಕದಿನ ಶತಕವೀರರ ಪಟ್ಟಿಯಲ್ಲಿ ಬ್ರಿಯಾನ್ ಲಾರಾ(19 ಶತಕ)ಅವರೊಂದಿಗೆ ಎರಡನೇ ಸ್ಥಾನ ಹಂಚಿಕೊಂಡರು. ಒಟ್ಟು 25 ಶತಕಗಳನ್ನು ಗಳಿಸಿರುವ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಹೋಪ್ ಅವರು ಎಲ್ಲ 12 ಟೆಸ್ಟ್ ಆಡುವ ದೇಶಗಳ ವಿರುದ್ಧ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಶತಕ ದಾಖಲಿಸಿರುವ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಅಪರೂಪದ ಸಾಧನೆ ಮಾಡಿದರು.
ಭಾರತದ ಮಾಜಿ ಬ್ಯಾಟರ್ ರಾಹುಲ್ ದ್ರಾವಿಡ್ ಆ ಕಾಲದಲ್ಲಿ ಎಲ್ಲ 10 ಟೆಸ್ಟ್ ಆಡುವ ದೇಶಗಳ ವಿರುದ್ಧ ಶತಕ ಗಳಿಸಿದ ಮೊದಲ ಆಟಗಾರನಾಗಿದ್ದರು. ದ್ರಾವಿಡ್ ನಿವೃತ್ತಿಯಾದ ನಂತರ 2017ರಲ್ಲಿ ಅಫ್ಘಾನಿಸ್ತಾನ ಹಾಗೂ ಐರ್ಲ್ಯಾಂಡ್ ತಂಡಗಳು ಟೆಸ್ಟ್ ಸ್ಥಾನಮಾನ ಪಡೆದಿದ್ದವು.
ಸಚಿನ್ ತೆಂಡುಲ್ಕರ್ ಕೂಡ ನಿವೃತ್ತಿಯಾಗುವ ವೇಳೆಗೆ ಆಡುತ್ತಿದ್ದ ಎಲ್ಲ 9 ತಂಡಗಳ ವಿರುದ್ಧ ಟೆಸ್ಟ್ ಶತಕ ಗಳಿಸಿದ್ದರು.
ವಿರಾಟ್ ಕೊಹ್ಲಿ ಅವರು ಐರ್ಲ್ಯಾಂಡ್ ತಂಡದ ವಿರುದ್ಧ ಶತಕ ಗಳಿಸಿಲ್ಲ.
ಹೋಪ್ ಅವರು ಏಕದಿನ ಕ್ರಿಕೆಟ್ನಲ್ಲಿ 6,000 ರನ್ ಪೂರೈಸಿದ್ದು ಈ ಸಾಧನೆ ಮಾಡಿದ ವೆಸ್ಟ್ಇಂಡೀಸ್ನ ಏಳನೇ ಆಟಗಾರ ಎನಿಸಿಕೊಂಡಿದ್ದರು. ವಿವಿ ರಿಚರ್ಡ್ಸ್ ನಂತರ ಅತ್ಯಂತ ವೇಗವಾಗಿ(147 ಪಂದ್ಯಗಳು)ಈ ಸಾಧನೆ ಮಾಡಿದ ಕೆರಿಬಿಯನ್ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.







